ಬೆಂಗಳೂರಿನಲ್ಲಿ ಇಂದು ( ಜೂನ್ 5 ) ಮಹಾರಾಜ ಟ್ರೋಫಿ 2026ರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಭಾರತ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಆಟಗಾರರು ಸೇರಿದಂತೆ ಹಲವಾರು ಅನ್‌ಕ್ಯಾಪ್ಡ್ ಆಟಗಾರನ್ನೊಳಗೊಂಡ 150 ಆಟಗಾರರು ಹರಾಜಿನಲ್ಲಿ ಭಾಗಿಯಾಗಿದ್ದಾರೆ.
ಇನ್ನು ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಯಶ್ ರಾಜ್ ಪೂಂಜಾ ರೀತಿಯ ಆಟಗಾರರು ಬಿಕರಿಯಾಗಿದ್ದು, ಪ್ರಸ್ತುತ ಕರ್ನಾಟಕದ ಬಿಗ್ಗೆಸ್ಟ್ ಸ್ಟಾರ್ ಪ್ಲೇಯರ್ ಎನಿಸಿಕೊಂಡಿರುವ ಕೆಎಲ್ ರಾಹುಲ್ ಎಷ್ಟು ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಎಂದು ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದರು.
ಆದರೆ, ಹರಾಜಿಗೆ ಎರಡು ಲಕ್ಷ ಮೂಲ ಬೆಲೆಯೊಂದಿಗೆ ಧುಮುಕಿದ್ದ ಕೆಎಲ್ ರಾಹುಲ್ ಅನ್‌ಸೋಲ್ಡ್ ಆಗಿದ್ದಾರೆ. ಏಕೆಂದರೆ ಮಹಾರಾಜ ಟ್ರೋಫಿ ಜೂನ್ 20ರಿಂದ ಜುಲೈ 12ರವರೆಗೆ ನಡೆಯಲಿದ್ದು, ಇದೇ ಸಮಯದಲ್ಲಿ ನಡೆಯಲಿರುವ ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯಲ್ಲಿ ಕೆಎಲ್ ರಾಹಲ್ ಭಾಗಿಯಾಗಲಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವ ಸಲುವಾಗಿ ಕೆಎಲ್ ರಾಹುಲ್ ಕೆಲ ಪಂದ್ಯಗಳಿಗೆ ಅಲಭ್ಯ ಎಂದು ನಿರೂಪಕರೇ ಘೋಷಿಸಿದ ಕಾರಣ ಯಾವ ಫ್ರಾಂಚೈಸಿ ಸಹ ರಾಹುಲ್‌ರನ್ನು ಖರೀದಿಸಲು ಮುಂದಾಗಲಿಲ್ಲ.
ಮಹಾರಾಜ ಟ್ರೋಫಿ ಲೀಗ್ ಹಂತದಲ್ಲಿ 30 ಪಂದ್ಯ ನಡೆಯಲಿದ್ದು, ಮೊದಲ 12 ಪಂದ್ಯಗಳು ಮೈಸೂರಿನಲ್ಲಿ ನಡೆದರೆ, 13ರಿಂದ 24 ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿದೆ, 25ರಿಂದ 30 ಪಂದ್ಯಗಳು, ಎಲಿಮಿನೇಟರ್ ( ಜುಲೈ 9 ), ಕ್ವಾಲಿಫಯರ್ ಒಂದು ( ಜುಲೈ 9 ) ಹಾಗೂ ಕ್ವಾಲಿಫಯರ್ ಎರಡು ( ಜುಲೈ 10 ) ಮತ್ತು ಫೈನಲ್ ಪಂದ್ಯ ( ಜುಲೈ 12 ) ಬೆಂಗಳೂರಿನಲ್ಲಿ ನಡೆಯಲಿವೆ.

