ಬೆಂಗಳೂರು: ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ಅಸಮಾಧಾನಗೊಂಡು ಸಚಿವ ರಾಅಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಬಗ್ಗೆ ವಿಪಕ್ಷ ನಾಯಕರು ಟೀಕಿಸಿದ್ದಾರೆ. ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ರಚನೆಯಾಗಿ 48 ಗಂಟೆಗಳಲ್ಲೇ ಸಚಿವರಿಬ್ಬರು ಖಾತೆ ಹಂಚಿಕೆ ವಿಚಾರವಾಗಿ ರಾಜೀನಾಮೆ ನೀಡಿದ್ದಾರೆ. ರಾಮಲಿಂಗಾರೆಡ್ಡಿಯಂತಹ ಹಿರಿಯ ನಾಯಕರೇ ಅಸಮಾಧಾನಗೊಂಡಿರುವುದನ್ನು ನೋಡಿದರೆ ರಾಜ್ಯದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆದರೇ ಅಚ್ಚರಿಯಿಲ್ಲ ಎಂದು ಹೇಳಿದರು.
ಜೂನ್ 5 ಕ್ಕೆ ರಾಮಲಿಂಗಾರೆಡ್ಡಿ ಗುದ್ದಲಿ ಪೂಜೆ ಆರಂಭಿಸಿದ್ದಾರೆ. ಖಾತೆ ಹಂಚಿಕೆ ಬಗ್ಗೆ ಅನೇಕ ಸಚಿವರಲ್ಲಿ ಅಸಮಾಧಾನವಿದೆ. 4 ಪವರ್ ಸೆಂಟರ್ ಆಗಿರುವುದು ಸಿಎಂ ಡಿ.ಕೆ.ಶಿವಕುಮಾರ್ ನಿದ್ದೆಗೆಡಿಸುವುದರಲ್ಲಿ ಸಂಶಯವಿಲ್ಲ ಎಂದರು.
ಈಗಾಗಲೇ ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ದುರಾಡಳಿತ ನೋಡಿ ಜನರು ಬೇಸತ್ತಿದ್ದಾರೆ. ಸಿಎಂ ಕುಚ್ಚಿಗೆ ನಡೆದ ಹಗ್ಗ ಜಗ್ಗಾಟ ಕಂಡು ಜನರು ರೋಸಿಹೋಗಿದ್ದಾರೆ. ಈಗ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಖಾತೆ ಹಂಚಿಕೆ ವಿಚಾರವಾಗಿ ಸಚಿವರಲ್ಲಿ ಅಸಮಾಧಾನ ಶುರುವಾಗಿದ್ದು, ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರಲಿದೆ. ಈ ಸರ್ಕಾರ ಆದಷ್ಟು ಬೇಗ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರಲಿ ಎಂದು ಜನರು ಅಪೇಕ್ಷಿಸುತ್ತಿದ್ದಾರೆ ಎಂದರು.

