ಪ್ಯೋಂಗ್ಯಾಂಗ್: ಉತ್ತರ ಕೊರಿಯಾದ ಆಡಳಿತಾರೂಢ ‘ವರ್ಕರ್ಸ್ ಪಾರ್ಟಿ’ಯು ಕಿಮ್ ಜಾಂಗ್ ಉನ್ ಅವರನ್ನು ಮತ್ತೊಮ್ಮೆ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. 1940ರ ದಶಕದ ಉತ್ತರಾರ್ಧದಿಂದಲೂ ಕಿಮ್ ಕುಟುಂಬವು ಸರ್ವಾಧಿಕಾರ ನಡೆಸುತ್ತಿರುವುದರಿಂದ, ಭಾನುವಾರ ಪ್ಯೋಂಗ್ಯಾಂಗ್‌ನಲ್ಲಿ ನಡೆದ ಪಕ್ಷದ ಮಹಾಧಿವೇಶನದಲ್ಲಿ ಕೈಗೊಂಡ ಈ ನಿರ್ಧಾರವು ಅಚ್ಚರಿಯನ್ನೇನೂ ಮೂಡಿಸಿಲ್ಲ.
ಉತ್ತರ ಕೊರಿಯಾವು ಕಿಮ್ ನಾಯಕತ್ವದಲ್ಲಿ ತನ್ನ “ಯುದ್ಧ ತಡೆಗಟ್ಟುವಿಕೆ” ಸಾಮರ್ಥ್ಯವನ್ನು, ವಿಶೇಷವಾಗಿ “ಪರಮಾಣು ಪಡೆಗಳನ್ನು” ಕೇಂದ್ರವಾಗಿಟ್ಟುಕೊಂಡು “ಗಣನೀಯವಾಗಿ ಸುಧಾರಿಸಿದೆ” ಎಂದು ಸರ್ಕಾರಿ ಸುದ್ದಿ ಸಂಸ್ಥೆ KCNA ತಿಳಿಸಿದೆ. ಅಂತರಾಷ್ಟ್ರೀಯ ನಿರ್ಬಂಧಗಳ ಹೊರತಾಗಿಯೂ, ಉತ್ತರ ಕೊರಿಯಾ ನಿರಂತರವಾಗಿ ತನ್ನ ಪರಮಾಣು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಆದರೆ, ಆ ದೇಶದ ಪರಮ ರಹಸ್ಯದ ನೀತಿಯಿಂದಾಗಿ ಮಿಲಿಟರಿ ಪ್ರಗತಿಯನ್ನು ನಿಖರವಾಗಿ ಅಂದಾಜಿಸುವುದು ಕಷ್ಟಕರವಾಗಿದೆ.
ಫೆಬ್ರವರಿ 19 ರಂದು ಆರಂಭವಾದ ‘ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ’ದ ಒಂಬತ್ತನೇ ಮಹಾಧಿವೇಶನವು ಈಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸುಮಾರು 5,000 ಪಕ್ಷದ ಸದಸ್ಯರು ಭಾಗವಹಿಸಿರುವ ಈ ಸಭೆಯಲ್ಲಿ ಕಿಮ್ ತನ್ನ ಮುಂದಿನ ಶಸ್ತ್ರಾಸ್ತ್ರ ಯೋಜನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಈ ಸಭೆಯ ಆರಂಭಕ್ಕೂ ಮುನ್ನ ಉತ್ತರ ಕೊರಿಯಾವು ಪರಮಾಣು ಸಾಮರ್ಥ್ಯವಿರುವ ರಾಕೆಟ್ ಲಾಂಚರ್‌ಗಳನ್ನು ಪ್ರದರ್ಶಿಸಿತ್ತು.
ಈ ಮಹಾಧಿವೇಶನದಲ್ಲಿ ಕಿಮ್ ಜಾಂಗ್ ಉನ್ ಅವರ ಪುತ್ರಿ ಜು ಏ (Ju Ae) ಕಾಣಿಸಿಕೊಳ್ಳುತ್ತಾರೆಯೇ ಎಂಬುದು ಈಗ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಯು ಕಿಮ್ ತನ್ನ 13 ವರ್ಷದ ಪುತ್ರಿ ಜು ಏ ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಆರಿಸಿದ್ದಾರೆ ಎಂದು ವರದಿ ಮಾಡಿತ್ತು. ಇತ್ತೀಚಿನ ಮಿಲಿಟರಿ ಪರೇಡ್‌ಗಳಲ್ಲಿ ಆಕೆ ತನ್ನ ತಂದೆಯೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಚೀನಾ ಮತ್ತು ರಷ್ಯಾದೊಂದಿಗೆ ಸ್ನೇಹ ಕಿಮ್ ಜಾಂಗ್ ಉನ್ ಅವರ ಮರು ನೇಮಕಕ್ಕೆ ಚೀನಾ ಅಧ್ಯಕ್ಷ ಶೃ ಜಿನ್‌ಪಿಂಗ್ ಅಭಿನಂದನೆ ಸಲ್ಲಿಸಿದ್ದು, “ಚೀನಾ-ಉತ್ತರ ಕೊರಿಯಾ ಸ್ನೇಹದ ಹೊಸ ಅಧ್ಯಾಯವನ್ನು ಬರೆಯಲು ಸಿದ್ಧ” ಎಂದು ತಿಳಿಸಿದ್ದಾರೆ. ಚೀನಾವು ಉತ್ತರ ಕೊರಿಯಾದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಸಹಾಯದ ಮೂಲವಾಗಿದೆ. ಆದರೆ, ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಕಿಮ್ ಬೆಳೆಯುತ್ತಿರುವ ನಿಕಟತೆ ಮತ್ತು ಅವರ ಪರಮಾಣು ಮಹತ್ವಾಕಾಂಕ್ಷೆಗಳ ಬಗ್ಗೆ ಚೀನಾ ಕೂಡ ಸ್ವಲ್ಪ ಮಟ್ಟಿಗೆ ಜಾಗರೂಕವಾಗಿದೆ.

