HomeLatest Newsಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಬಿಟ್ಟ ಗಾಂಧಿ ಹೆಸರನ್ನು ಕೇಂದ್ರ ಸರ್ಕಾರ ಮತ್ತೆ ಇಡಬೇಕು: ಈಶ್ವರ್ ಖಂಡ್ರೆ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಬಿಟ್ಟ ಗಾಂಧಿ ಹೆಸರನ್ನು ಕೇಂದ್ರ ಸರ್ಕಾರ ಮತ್ತೆ ಇಡಬೇಕು: ಈಶ್ವರ್ ಖಂಡ್ರೆ

ನವದೆಹಲಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಸ್ವರಾಜ್ಯದ ಪ್ರತಿಪಾದಕರಾಗಿದ್ದ ಮಹಾತ್ಮಾ ಗಾಂಧೀ ಹೆಸರು ಕೈಬಿಟ್ಟಿರುವ ಕೇಂದ್ರ ಸರ್ಕಾರ ಮಹಾತ್ಮಾಗಾಂಧೀ ವಿಬಿ ಜಿ ರಾಮ್ ಜೀ ಎಂದು ಮರುನಾಮಕರಣ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರು ಭಾರತ ಹಳ್ಳಿಗಳ ದೇಶವಾಗಿದ್ದು, ದೇಶದ ಆತ್ಮ ಇರುವುದೇ ಗ್ರಾಮಗಳಲ್ಲಿ ಎಂದು ಹೇಳಿದ್ದರು. ಗ್ರಾಮಗಳ ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಆಗದು ಎಂದು ಪ್ರತಿಪಾದಿಸಿದ್ದರು. ಇಂತಹ ಮಹಾಪುರುಷರ ಹೆಸರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದರು.

ಕೇಂದ್ರ ಸರ್ಕಾರ ವಿ ಬಿ ಜಿ ರಾಮ್ ಜಿಗೆ ಮಹಾತ್ಮಾ ಗಾಂಧೀ ಹೆಸರು ಸೇರಿಸಬೇಕು ಇಲ್ಲವೇ ದೇಶದಲ್ಲಿರುವ 2.68 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಾಗಾಂಧೀ ಹೆಸರಿಡಬೇಕು (ಉದಾಹರಣೆಗೆ ಮಹಾತ್ಮಾಗಾಂಧೀ ಜನವಾಡ ಗ್ರಾಮ ಪಂಚಾಯ್ತಿ) ಎಂದು ಒತ್ತಾಯಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಸತ್ಯ, ಶಾಂತಿ, ಅಹಿಂಸೆ ಎಂಬ ಅಸ್ತ್ರದಿಂದ ಭಾರತಾಂಬೆಯನ್ನು ಬಂಧಮುಕ್ತಗೊಳಿಸಿದ ಮಹಾತ್ಮನಿಗೆ ನೈಜ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಖಂಡ್ರೆ ತಿಳಿಸಿದರು.

365 ದಿನವೂ ಉದ್ಯೋಗ ಖಾತ್ರಿಗೆ ತಾಕೀತು:

ಗ್ರಾಮೀಣ ಜನರಿಗೆ ಸುಗ್ಗಿಯ ಕಾಲದಲ್ಲಿ 60 ದಿನಗಳ ಕಾಲ ಉದ್ಯೋಗ ನೀಡುವುದಿಲ್ಲ ಎಂಬುದು ಸರಿಯಲ್ಲ. ಗ್ರಾಮೀಣ ಕುಟುಂಬದ ಜನರು ಉದ್ಯೋಗಕ್ಕೆ ಬೇಡಿಕೆ ಇಟ್ಟಾಗ ಅವರಿಗೆ ಉದ್ಯೋಗ ನೀಡಬೇಕು. ವರ್ಷದ 365 ದಿನವೂ ಉದ್ಯೋಗದ ಖಾತ್ರಿ ನೀಡಬೇಕು ಎಂದು ಅವರು ಸಲಹೆ ನೀಡಿದರು.

60:40ರ ಅನುಪಾತದ ಬದಲು 90:10ಕ್ಕೆ ಖಂಡ್ರೆ ಆಗ್ರಹ:

ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿಯಲ್ಲಿ 60:40ರ ಅನುಪಾತ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಗೆ ಅಧಿಕ ಹೊರೆಯಾಗುತ್ತಿದೆ. ಗ್ರಾಮೀಣ ಬಡವರ ಉದ್ಯೋಗದ ಖಾತ್ರಿಗೆ ಕೇಂದ್ರ ಸರ್ಕಾರ ಮನ್ರೇಗಾದಲ್ಲಿದ್ದಂತೆ 90:10ರ ಅನುಪಾತವನ್ನೇ ಮುಂದುವರಿಸಬೇಕು ಎಂದೂ ಆಗ್ರಹಿಸಿದರು.

2186 ಕೋಟಿ ರೂ. ಬಾಕಿ ಬಿಡುಗಡೆಗೆ ಒತ್ತಾಯ: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 2186 ಕೋಟಿ ರೂ. ಬಾಕಿ ಬರಬೇಕಾಗಿದ್ದು, ವರ್ಷದಿಂದ ಬಂದಿಲ್ಲ. ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ಈಶ್ವರ ಖಂಡ್ರೆ ಒತ್ತಾಯಿಸಿದರು. ಗ್ರಾಮೀಣ ಬಡವರ, ವಂಚಿತರ, ದುರ್ಬಲರ, ಪರಿಶಿಷ್ಟ ಜಾತಿ, ಪಂಗಡದವರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಲೇ ಜುಲೈ 1ರಿಂದ ಹೊಸ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ ಎಂದು ಸ್ಪಷ್ಟಪಡಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular