HomeIndiaಹೃದಯದ ನರಕ್ಕೆ ತಗುಲುವಂತಿತ್ತು ಚಾಕು: ಉತ್ತರ ಪ್ರದೇಶದ ವೈದ್ಯರ ಚಮತ್ಕಾರಕ್ಕೆ ಬದುಕುಳಿದ ಯುವಕ!

ಹೃದಯದ ನರಕ್ಕೆ ತಗುಲುವಂತಿತ್ತು ಚಾಕು: ಉತ್ತರ ಪ್ರದೇಶದ ವೈದ್ಯರ ಚಮತ್ಕಾರಕ್ಕೆ ಬದುಕುಳಿದ ಯುವಕ!

ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (KGMU) ವೈದ್ಯರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ 34 ವರ್ಷದ ಯುವಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆತನಿಗೆ ಮರುಜೀವ ನೀಡಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಸರ್ವೇಶ್ ಎಂಬಾತನ ಮೇಲೆ ಜುಲೈ 4 ರ ರಾತ್ರಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿತ್ತು. ಹಲ್ಲೆಯ ತೀವ್ರತೆಗೆ ಬಲಗಡೆಯ ಎದೆಯ ಭಾಗದಲ್ಲಿ ಬರೋಬ್ಬರಿ 13 ಸೆಂಟಿಮೀಟರ್ ಉದ್ದದ ಚಾಕುವಿನ ಬ್ಲೇಡ್ ಆಳವಾಗಿ ಸಿಲುಕಿಕೊಂಡಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜುಲೈ 5 ರ ಬೆಳಗ್ಗೆ ಲಕ್ನೋದ ಕೆಜಿಎಂಯು ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ದಾಖಲಾಗುವಾಗ ರೋಗಿಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಯುವಕ ತೀವ್ರ ಆಂತರಿಕ ರಕ್ತಸ್ರಾವ ಹಾಗೂ ಅಪಾಯಕಾರಿ ಮಟ್ಟದ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಸಿಟಿ ಸ್ಕ್ಯಾನ್ ವರದಿಯಲ್ಲಿ ಚಾಕುವಿನ ಬ್ಲೇಡ್ ಬಲ ಶ್ವಾಸಕೋಶದ ಪ್ರಮುಖ ರಕ್ತನಾಳಗಳು ಮತ್ತು ಶ್ವಾಸನಾಳಗಳು ಹಾದುಹೋಗುವ ಸೂಕ್ಷ್ಮ ಪ್ರದೇಶಕ್ಕೆ ತೂರಿಕೊಂಡಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ ಶ್ವಾಸಕೋಶದ ಅಪಧಮನಿಯ ಒಂದು ಶಾಖೆಗೆ ಹಾನಿ ಮಾಡಿದ್ದ ಚಾಕು, ದೇಹದ ಅತ್ಯಂತ ಪ್ರಮುಖ ರಕ್ತನಾಳಗಳಲ್ಲಿ ಒಂದಾದ ಸುಪೀರಿಯರ್ ವೆನಾ ಕ್ಯಾವಾದಿಂದ ಕೇವಲ ಕೆಲವು ಮಿಲಿಮೀಟರ್‌ಗಳಷ್ಟು ದೂರದಲ್ಲಿ ನಿಂತಿತ್ತು. ಇದು ಅತ್ಯಂತ ಹೆಚ್ಚಿನ ಅಪಾಯದಿಂದ ಕೂಡಿದ ಪರಿಸ್ಥಿತಿಯಾಗಿದ್ದು, ಸೂಕ್ತ ಸಿದ್ಧತೆಗಳಿಲ್ಲದೆ ಚಾಕುವನ್ನು ಹೊರತೆಗೆದಿದ್ದರೆ ರೋಗಿ ಸ್ಥಳದಲ್ಲೇ ಸಾವನ್ನಪ್ಪುವ ಸಾಧ್ಯತೆ ಇತ್ತು.

ವೈದ್ಯರ ತಂಡವು ತಕ್ಷಣವೇ ಚಾಕುವನ್ನು ಹೊರಗೆಳೆಯುವ ಸಾಹಸಕ್ಕೆ ಕೈಹಾಕದೆ, ಆಪರೇಷನ್ ಥಿಯೇಟರ್‌ನಲ್ಲಿ ಸುತ್ತಲಿನ ರಕ್ತನಾಳಗಳನ್ನು ಸುರಕ್ಷಿತವಾಗಿ ನಿಯಂತ್ರಣಕ್ಕೆ ತರುವವರೆಗೆ ಚಾಕುವನ್ನು ಹಾಗೆಯೇ ಇರಿಸಿದ್ದರು. ಇಂತಹ ಸಂದರ್ಭಗಳಲ್ಲಿ ದೇಹದೊಳಗೆ ಸಿಲುಕಿರುವ ವಸ್ತುವು ರಕ್ತಸ್ರಾವವನ್ನು ತಡೆಯುವ ತಾತ್ಕಾಲಿಕ ಮುಚ್ಚಳದಂತೆ ಕೆಲಸ ಮಾಡುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ. ಪ್ರೊಫೆಸರ್ ಸಮೀರ್ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಟ್ರಾಮಾ ಸರ್ಜರಿ ವಿಭಾಗದ ಹೆಚ್ಚುವರಿ ಪ್ರೊಫೆಸರ್ ಡಾ. ವೈಭವ್ ಜೈಸ್ವಾಲ್ ನೇತೃತ್ವದ ತಜ್ಞ ವೈದ್ಯರ ತಂಡವು ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯ ಬಲ ಎದೆಯ ಭಾಗವನ್ನು ತೆರೆದು ಅಲ್ಲಿ ಸಂಗ್ರಹವಾಗಿದ್ದ ಸುಮಾರು 500 ಮಿಲಿ ಲೀಟರ್ ರಕ್ತ ಮತ್ತು ಹೆಪ್ಪುಗಟ್ಟಿದ ರಕ್ತದ ಗಡ್ಡೆಗಳನ್ನು ಹೊರತೆಗೆಯಲಾಯಿತು. ರಕ್ತಸ್ರಾವವನ್ನು ಯಶಸ್ವಿಯಾಗಿ ನಿಯಂತ್ರಿಸಿದ ನಂತರ ಅತ್ಯಂತ ಜಾಗರೂಕತೆಯಿಂದ ಚಾಕುವಿನ ಬ್ಲೇಡ್ ಅನ್ನು ಹೊರತೆಗೆದು, ಹಾನಿಗೊಳಗಾಗಿದ್ದ ರಕ್ತನಾಳವನ್ನು ದುರಸ್ತಿ ಮಾಡುವ ಮೂಲಕ ಶ್ವಾಸಕೋಶವನ್ನು ರಕ್ಷಿಸಲಾಗಿದೆ. ಸದ್ಯ ಸರ್ವೇಶ್ ತೀವ್ರ ನಿಗಾ ಘಟಕದಲ್ಲಿ (ICU) ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಈ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆ ನೀಡಿರುವ ವೈದ್ಯರು, ಯಾರ ದೇಹಕ್ಕಾದರೂ ಚಾಕು, ಕಬ್ಬಿಣದ ರಾಡ್ ಅಥವಾ ಯಾವುದೇ ಹರಿತವಾದ ವಸ್ತುಗಳು ಚುಚ್ಚಿಕೊಂಡರೆ ಆಸ್ಪತ್ರೆಯ ಹೊರಗೆ ಅದನ್ನು ಬಲವಂತವಾಗಿ ಹೊರತೆಗೆಯಲು ಪ್ರಯತ್ನಿಸಬೇಡಿ. ಹಾಗೆ ಮಾಡುವುದರಿಂದ ಆಂತರಿಕ ರಕ್ತಸ್ರಾವ ತೀವ್ರಗೊಂಡು ಜೀವಕ್ಕೇ ಆಪತ್ತು ಬರಬಹುದು ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular