HomeIndiaದೇವರನಾಡಿನಲ್ಲಿ ಭೀಕರ ಪ್ರವಾಹ: 15 ಜನರು ಸಾವು, 7 ಜನರು ನಾಪತ್ತೆ

ದೇವರನಾಡಿನಲ್ಲಿ ಭೀಕರ ಪ್ರವಾಹ: 15 ಜನರು ಸಾವು, 7 ಜನರು ನಾಪತ್ತೆ

ತಿರುವನಂತಪುರಂ: ದೇವರನಾಡು ಕೇರಳಂನಲ್ಲಿ ಭಾರಿ ಮಳೆಯಿಂದ ಸಾಲು ಸಾಲು ಅನಾಹುತಗಳು ಸಂಭವಿಸಿದ್ದು, ಭೀಕರ ಪ್ರವಾಹ, ಭೂಕುಸಿತದ ಹೊಡೆತಕ್ಕೆ ಈವರೆಗೆ 15 ಜನರು ಸಾವನ್ನಪ್ಪಿದ್ದಾರೆ.

ಮಳೆ ಅನಾಹುತದಲ್ಲಿ 15 ಜನರು ಮೃತಪಟ್ಟಿದ್ದು, 7 ಜನರು ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ವಿ.ಡಿ.ಸತೀಶನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸತೀಶನ್, ರಾಜ್ಯ ಸರ್ಕಾರವು ರಾಜ್ಯಾದ್ಯಂತ 316 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಇದುವರೆಗೂ 11,018 ಜನರಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆ ಅಬ್ಬರ, ಪ್ರವಾಹ ಸ್ಥಿತಿಯಿಂದಾಗಿ ಕೊಟ್ಟಾಯಂ ಜಿಲ್ಲೆಯಲಿ 3 ಜನ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಸಣ್ಣ ಮಗುವೂ ಸೇರಿದೆ. ಕೊಟ್ಟಾಯಂನಲ್ಲಿ ಮೃತಪಟ್ಟ ಮೂವರಲ್ಲಿ ಇಬ್ಬರು ಪೂಂಜಾರ್ ಶಾಸನಸಭಾ ಕ್ಷೇತ್ರದವರಾಗಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಮಳೆಯಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಎರ್ನಾಕುಲಂನಲ್ಲಿ ಇಬ್ಬರು ಮೃತಪಟ್ಟಿದ್ದರೆ, ಇಡುಕ್ಕಿ ಮತ್ತು ಮೂವಾಟ್ಟುಪುಳ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೊಲ್ಲಂನಲ್ಲಿ 2, ಮಲಪ್ಪುರಂನಲ್ಲಿ 4 ಮತ್ತು ಕಣ್ಣೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕೋಝಿಕ್ಕೋಡ್‌ನಿಂದಲೂ ಒಂದು ಸಾವು ವರದಿಯಾಗಿದೆ. ಈವರೆಗೆ ಒಟ್ಟು 15 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

7 ಜನರು ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ 7 ಜನರ ಪೈಕಿ ಇಬ್ಬರು ಕೊಲ್ಲಂ, ಇಬ್ಬರು ಕಣ್ಣೂರು ಮತ್ತು ಒಬ್ಬರು ಮಲಪ್ಪುರಂ ಜಿಲ್ಲೆಯವರಾಗಿದ್ದಾರೆ. ಇದಲ್ಲದೆ ಇಡುಕ್ಕಿ ಮತ್ತು ಮೂವಾಟ್ಟುಪುಳದಿಂದ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸಲು ಕೊಲ್ಲಂನಿಂದ ಚೆಂಗನ್ನೂರಿನವರೆಗೆ 14 ಮೀನುಗಾರಿಕಾ ದೋಣಿಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿನ ಸುಲೂರ್‌ನಿಂದ ಬಂದಿರುವ ಎರಡು ಹೆಲಿಕಾಪ್ಟರ್‌ಗಳನ್ನು ವೈಮಾನಿಕ ಕಾರ್ಯಾಚರಣೆಗಾಗಿ ತಿರುವನಂತಪುರಂನಲ್ಲಿ ಸಜ್ಜಾಗಿಡಲಾಗಿದೆ. ತೀವ್ರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ತಂಡಗಳನ್ನು ನಿಯೋಜಿಸಲಾಗಿದ್ದು, ಅರಕ್ಕೋಣಂನಿಂದ ಹೆಚ್ಚುವರಿ ಪಡೆಯನ್ನು ಕರೆಸಲಾಗುತ್ತಿದೆ. ಪರಿಸ್ಥಿತಿ ಕೈಮೀರಿದರೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮತ್ತು ರಕ್ಷಣಾ ಭದ್ರತಾ ಪಡೆಯನ್ನು (DSC) ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇನ್ನು ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 8 ಲಕ್ಷ ಪರಿಹಾರ ಹಾಗೂ ಶವಸಂಸ್ಕಾರದ ವೆಚ್ಚಕ್ಕಾಗಿ ತಕ್ಷಣವೇ 10,000 ರೂ. ಒದಗಿಸಲಾಗುವುದು. ಭೂಕುಸಿತದಲ್ಲಿ ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಹಣವನ್ನು 10 ಲಕ್ಷದಿಂದ 12 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಕೇರಳಂ ಸರ್ಕಾರ ತಿಳಿಸಿದೆ.

ಈ ನಡುವೆ ಭಾರತೀಯ ಹವಾಮಾನ ಇಲಾಖೆ ಆಗಸ್ಟ್ 3 ಮತ್ತು ಆಗಸ್ಟ್ 6ರಂದು ಕೇರಳಂದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಗಾಳಿಯ ವೇಗ ಗಂಟೆಗೆ 50 ಕಿ.ಮೀವರೆಗೆ ತಲುಪಬಹುದು ಎಂದು ಮಾಹಿತಿ ನೀಡಿದೆ.

ಕೇರಳ-ಕರ್ನಾಟಕ-ಲಕ್ಷದ್ವೀಪ ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ. ಕಡಲ ಕೊರೆತ ಹೆಚ್ಚಿರಲಿದ್ದು, ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ.ವರೆಗೆ ತಲುಪಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular