ತಿರುವನಂತಪುರಂ: ಉಕ್ರೇನ್‌ನ ಒಡೆಸ್ಸಾ ಬಂದರಿನ ಬಳಿ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ನಾಲ್ವರು ಭಾರತೀಯರು ಸಾವನ್ನಪಿದ್ದಾರೆ. ಮೃತರಲ್ಲಿ ಓರ್ವ ಕೇರಳ ಮೂಲದ ಕಾಅಸರಗೋಡಿನ ಯುವಕ.
ಉಕ್ರೇನ್‌ನ ಒಡೆಸಾ ಬಂದರು ಕರಾವಳಿಯಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ಬಲಿಯಾದ ನಾಲ್ವರು ಭಾರತೀಯರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕುಂಡು ನಿವಾಸಿ, ನಾವಿಕ 26 ವರ್ಷದ ಅಖಿಲ್ ಜೋಯನ್ ಕೂಡ ಒಬ್ಬರು.
ಅಖಿಲ್ ಜೋಯನ್ ನಿಶ್ಚಿತಾರ್ಥ ಮಾಡಿಕೊಂಡು ಕೇವಲ ಒಂದು ವಾರವಷ್ಟೇ ಆಗಿತ್ತು, ಕೆಲವೇ ತಿಂಗಳುಗಳಲ್ಲಿ ಮದುವೆ ಕೂಡ ನಿಶ್ಚಯವಾಗಿತ್ತು. ಹೊಸ ಕನಸುಗಳು, ಹೊಸ ಹುರುಪಿನೊಂದಿಗೆ ಕೆಲಸಕ್ಕೆ ಮರಳಿದ್ದ ಅಖಿಲ್ ರಷ್ಯಾದ ಭೀಕರ ದಾಳಿಯಲ್ಲಿ ಮೃತಪಟ್ತಿದ್ದಾರೆ.
ಅಖಿಲ್ ಜೋಯನ್ ಕೇವಲ 19 ನೇ ವಯಸ್ಸಿನಲ್ಲಿಯೇ ಮರ್ಚೆಂಟ್ ನೇವಿಗೆ ಸೇರಿದ್ದರು. ಕಳೆದ 6 ವರ್ಷಗಳಿಂದ ಹಡಗಿನಲ್ಲಿ ನಾವಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಖಿಲ್, ತಮ್ಮ ಶ್ರಮದಿಂದಲೇ ಇತ್ತೀಚೆಗಷ್ಟೇ ಸುಂದರವಾದ ಹೊಸ ಮನೆಯೊಂದನ್ನು ಕಟ್ಟಿದ್ದರು. ಎಲೆಕ್ಟ್ರಿಕಲ್ ಅಂಗಡಿ ನಡೆಸುವ ತಂದೆ ಜೋಯನ್ ಮತ್ತು ವಿಮಾ ಏಜೆಂಟ್ ತಾಯಿ ಸ್ಯಾಲಿ ದಂಪತಿಗೆ ಅಖಿಲ್ ಏಕೈಕ ಪುತ್ರ.
ಕೆಲವೇ ದಿನಗಳ ಹಿಂದೆಯಷ್ಟೇ ಆಲಪ್ಪುಳ ಮೂಲದ ಯುವತಿಯೊಂದಿಗೆ ಅಖಿಲ್ ಅವರ ನಿಶ್ಚಿತಾರ್ಥ ವೈಭವದಿಂದ ನೆರವೇರಿತ್ತು. ಇನ್ನೆರಡು ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಯ ನಂತರ ಈ ಅಪಾಯಕಾರಿ ಹಡಗಿನ ಕೆಲಸ ತೊರೆದು ಬೇರೆಡೆ ಹೊಸ ಕೆಲಸಕ್ಕೆ ಸೇರಬೇಕೆಂಬುದು ಅವರ ಕನಸಾಗಿತ್ತು. ಆದರೆ, ನಿಶ್ಚಿತಾರ್ಥ ಮುಗಿಸಿ ಕೆಲಸಕ್ಕೆ ಮರಳಿದ ಕೇವಲ ಒಂದು ವಾರದಲ್ಲೇ ದುರಂತ ಸಂಭವಿಸಿದೆ.
ಸೋಮವಾರ ಸಂಜೆ ಅಖಿಲ್ ಕೆಲಸ ಮಾಡುತ್ತಿದ್ದ ಶಿಪ್ಪಿಂಗ್ ಕಂಪನಿಯಿಂದ ಕುಟುಂಬಕ್ಕೆ ಬಂದ ಒಂದೇ ಒಂದು ಇಮೇಲ್ ಇಡೀ ಕುಟುಂಬದ ಕನಸುಗಳನ್ನು ನುಚ್ಚುನೂರಾಗುವಂತೆ ಮಾಡಿದೆ. ಅಖಿಲ್ ತಮ್ಮ ಹುಟ್ಟೂರಿನಲ್ಲಿ ಅತ್ಯಂತ ಜನಪ್ರಿಯ ಮತ್ತು ಶಿಸ್ತಿನ ಯುವಕನಾಗಿದ್ದರು.
ಪಶ್ಚಿಮ ಆಫ್ರಿಕಾದ ಧ್ವಜವನ್ನು ಹೊಂದಿದ್ದ ‘ಎಂವಿ ಗೋಲ್ಡನ್ ಲಿಯೋ’ ಎಂಬ ಸರಕು ಸಾಗಣೆ ಹಡಗು ಉಕ್ರೇನಿಯನ್ ಜೋಳವನ್ನು ಹೊತ್ತು ಒಡೆಸಾ ಬಂದರಿನಿಂದ ಹೊರಟಿತ್ತು. ಈ ವೇಳೆ ರಷ್ಯಾದ ಪಡೆಗಳು ನಡೆಸಿದ ಭಾರಿ ದಾಳಿಗೆ ಹಡಗು ಸಿಲುಕಿ, ಭಾರತದ ನಾಲ್ವರು ಹಾಗೂ ಸಿರಿಯಾದ ಐವರು ನಾವಿಕರು ಸೇರಿದಂತೆ ಒಟ್ಟು 10 ಸಿಬ್ಬಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದಾರೆ.
ಸದ್ಯ ಅಖಿಲ್ ಅವರ ಭೌತಿಕ ಶರೀರವನ್ನು ಸ್ವದೇಶಕ್ಕೆ ತರಲು ಕೇರಳ ಮುಖ್ಯಮಂತ್ರಿ ಕಚೇರಿ ಹಾಗೂ ನೋರ್ಕಾ ಇಲಾಖೆಯು ರಷ್ಯಾದ ಕಾನ್ಸುಲೇಟ್ ಮತ್ತು ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

