ಬೆಂಗಳೂರು- ರಾಜ್ಯದಲ್ಲಿ ಪೊಲೀಸ್ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆ ಇರಿಸಿವೆ. ಕಳೆದ ಕೆಲವು ವರ್ಷಗಳಲ್ಲಿ ನಡೆದ ಪರೀಕ್ಷಾ ಹಗರಣಗಳ ಕಳಂಕವನ್ನು ತೊಡೆದುಹಾಕಿ, ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಆಗಸ್ಟ್ 2ರಿಂದ ಕಟ್ಟುನಿಟ್ಟಿನ ಭದ್ರತೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಹುದ್ದೆಗಳ ವಿವರ ಮತ್ತು ಮೀಸಲಾತಿ
ರಾಜ್ಯ ಪೊಲೀಸ್ ಇಲಾಖೆಯ ವಿವಿಧ ವೃಂದಗಳ ಒಟ್ಟು 3,991 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿ ಈ ಪರೀಕ್ಷೆಗಳು ನಡೆಯುತ್ತಿವೆ.
ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ 596 ಹುದ್ದೆಗಳನ್ನು ಮೀಸಲಿಡಲಾಗಿದೆ. ಪುರುಷ ಅಭ್ಯರ್ಥಿಗಳಿಗೆ 2,266, ಮಹಿಳಾ ಅಭ್ಯರ್ಥಿಗಳಿಗೆ 755, ಸೇವಾನಿರತ ಪುರುಷರಿಗೆ 257, ಸೇವಾನಿರತ ಮಹಿಳೆಯರಿಗೆ 82 ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 35 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
ಕೇವಲ ಬೆಂಗಳೂರು ನಗರದಲ್ಲೇ ಸುಮಾರು 2 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಒಟ್ಟು 149 ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಲು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ.
ಹಗರಣದ ಪಾಠ: ಈ ಬಾರಿ ಕಠಿಣ ನಿಯಮಗಳು
2021ರ ಪಿಎಸ್‌ಐ (PSI) ಪರೀಕ್ಷಾ ಹಗರಣ ಮತ್ತು ಇತ್ತೀಚಿನ ರಾಷ್ಟ್ರಮಟ್ಟದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಂದ ಪಾಠ ಕಲಿತಿರುವ ರಾಜ್ಯ ಸರ್ಕಾರ ಹಾಗೂ ಕೆಇಎ (KEA), ಈ ಬಾರಿ ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.
ಪ್ರಾಧಿಕಾರದ ಅನ್ವಯ ಡ್ರೆಸ್ ಕೋಡ್ ಕೂಡ ಪಾಲಿಸಬೇಕು.
ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಹೈ-ಡೆಫಿನಿಷನ್ (HD) ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕೆಲವು ಕೇಂದ್ರಗಳಲ್ಲಿ ನೇರ ಪ್ರಸಾರ (Live Streaming) ವ್ಯವಸ್ಥೆ ಮಾಡಲಾಗಿದೆ.
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ತಪಾಸನಾ ಕೇಂದ್ರಗಳನ್ನು ತೆರೆಯಲಾಗಿದ್ದು, ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಮೂಲಕ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತದೆ.
ಪರೀಕ್ಷಾ ಕೇಂದ್ರದ ಸುತ್ತಲೂ 100 ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಬ್ಯಾಗ್ ಅಥವಾ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಈ ವಲಯದ ಮೇಲೆ ಸಂಪೂರ್ಣ ಪೊಲೀಸ್ ನಿಗಾ ಇರುತ್ತದೆ.
ಪರೀಕ್ಷೆಯಲ್ಲಿ ಅಕ್ರಮ ಅಥವಾ ನಕಲು ಮಾಡಲು ಯತ್ನಿಸುವವರಿಗೆ ಕಠಿಣ ಜೈಲು ಶಿಕ್ಷೆ ಹಾಗೂ ಭಾರೀ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ.
ಪೇಪರ್ ಲೀಕ್ ಅಥವಾ ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಮುನ್ಸೂಚನೆ ನೀಡಿ, ತಕ್ಷಣವೇ ಬಂಧಿಸುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಈಗಾಗಲೇ ಶಂಕಿತರ ಪಟ್ಟಿಯನ್ನು ಸಿದ್ಧಪಡಿಸಿ ಅವರ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ.
ವಿಶ್ವಾಸ ಮರುಸ್ಥಾಪನೆಗೆ ನಿರ್ಣಾಯಕ ಹೆಜ್ಜೆ
ಪೊಲೀಸ್ ಇಲಾಖೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಈ ಬಾರಿಯ ನೇಮಕಾತಿ ಪರೀಕ್ಷೆಯು ಅತ್ಯಂತ ನಿರ್ಣಾಯಕವಾಗಿದೆ. ಕೇವಲ ನೇಮಕಾತಿ ನಡೆಸುವುದು ಮಾತ್ರವಲ್ಲದೆ, ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಕೆಇಎ ಮತ್ತು ಪೊಲೀಸ್ ಇಲಾಖೆಯ ಜಂಟಿ ಬಿಗಿ ಭದ್ರತೆಯು ಯಶಸ್ವಿಯಾದರೆ, ಇದು ಮುಂದಿನ ಎಲ್ಲಾಫ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾದರಿಯಾಗಲಿದೆ ಹಾಗೂ ಅರ್ಹ ಯುವಕ-ಯುವತಿಯರಿಗೆ ನೈಜ ಅವಕಾಶಗಳು ಲಭ್ಯವಾಗಲಿವೆ.
ಪರೀಕ್ಷೆಗಳ ವೇಳಾಪಟ್ಟಿ
ಈ ಹುದ್ದೆಗೆ ಈಗಾಗಲೇ ಕಡ್ಡಾಯ ಲಿಖಿತ ಪರೀಕ್ಷೆ ನಡೆದಿದ್ದು, ಸಾಮಾನ್ಯ ಅಧ್ಯಯನದ ಮತ್ತೊಂದು ಲಿಖಿತ ಪರೀಕ್ಷೆ ಭಾನುವಾರ ಆಗಸ್ಟ್ 2ರಂದು ನಡೆಯಲಿದೆ.
3,395 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಗಸ್ಟ್ 2ರಂದು ಬೆಳಗ್ಗೆ 10.30 ರಿಂದ 12ಗಂಟೆವರೆಗೆ ನಡೆಯಲಿದೆ. ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಸ್ಥಳೀಯ 371 ಜೆ ವೃಂದದ 596 ಹುದ್ದೆಗಳಿಗೆ ಆಗಸ್ಟ್ 2ರಂದು ಮಧ್ಯಾಹ್ನ 2.30 ರಿಂದ 4ರವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ.
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಸ್ಥಳೀಯ ವೃಂದದ 179 ಹುದ್ದೆಗೆ ಆಗಸ್ಟ್ 6ರಂದು ಮಧ್ಯಾಹ್ನ 2-30 ರಿಂದ 4ಗಂಟೆಗೆ ನಡೆಯಲಿದೆ.
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ 371 ಜೆ ವೃಂದ ಸಿಎಆರ್ 859 ಹುದ್ದೆಗೆ ಆಗಸ್ಟ್ 20 ರಂದು ಮಧ್ಯಾಹ್ನ 2.30ರಿಂದ 4ರವರೆಗೆ ಪರೀಕ್ಷೆ ನಿಗದಿಪಡಿಸಲಾಗಿದೆ. ವಿವಿಧ ಹಂತದಲ್ಲಿ ಪರೀಕ್ಷೆ ನಿಗದಿಸುವ ಮೂಲಕ ಕಟ್ಟು ನಿಟ್ಟಿನ ನಿಯಮಗಳ ಮೂಲಕ ಪರೀಕ್ಷೆಗಳು ನಡೆಯಬೇಕು ಎಂದು ಆದೇಶವನ್ನೂ ಕೂಡ ಹೊರಡಿಸಲಾಗಿದೆ.

