ಬೆಂಗಳೂರು: ನೈಸ್ ರಸ್ತೆ ನಿರ್ಮಾಣಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಡೆಸಿದ್ದ ಭೂಸ್ವಾಧೀನ ಪ್ರಕರಣದಲ್ಲಿ ನೂರಾರು ರೈತರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಈ ಸಂಬಂಧ ನೈಸ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ.
ಹೌದು. ನೈಸ್ ರಸ್ತೆಗಾಗಿ ಕೆಐಎಡಿಬಿ ನಡೆಸಿದ್ದ ಭೂಸ್ವಾಧೀನ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೂರಾರು ರೈತರಿಗೆ ಮಹತ್ವದ ರಿಲೀಫ್ ನೀಡಿದೆ. ನೈಸ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ವಜಾಗೊಳಿಸಿದ್ದು, ನೈಸ್ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ, ರಸ್ತೆ ನಿರ್ಮಾಣದ ವೇಳೆ ಕೆರೆಗಳು ಹಾಗೂ ಖಾಸಗಿ ಜಮೀನುಗಳ ಅತಿಕ್ರಮಣದ ಆರೋಪಗಳನ್ನೂ ಗಂಭೀರವಾಗಿ ಪರಿಗಣಿಸಿದೆ.
ಪ್ರಕರಣದ ವಿಚಾರಣೆ ವೇಳೆ ರೈತರ ಪರ ಹಿರಿಯ ವಕೀಲ ಹೆಚ್. ಎನ್. ಶಶಿಧರ್ ವಾದ ಮಂಡಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ನೈಸ್ ಯೋಜನೆಗೆ ಸಂಬಂಧಿಸಿದ ಹಲವು ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.
ವಿಚಾರಣೆ ವೇಳೆ ಹೈಕೋರ್ಟ್, ನೈಸ್ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವ ಅಗತ್ಯವಿದೆ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ನೈಸ್ ರಸ್ತೆ ನಿರ್ಮಾಣದ ವೇಳೆ ಕೆರೆಗಳು ಹಾಗೂ ಖಾಸಗಿ ಜಮೀನುಗಳನ್ನೂ ಅತಿಕ್ರಮಿಸಲಾಗಿದೆ ಎಂಬ ಆರೋಪಗಳ ಬಗ್ಗೆ ಗಂಭೀರ ಪರಿಶೀಲನೆ ಅಗತ್ಯ ಎಂದು ನ್ಯಾಯಾಲಯ ಸೂಚಿಸಿದೆ.ನೈಸ್ ದೊಡ್ಡ ಮೊತ್ತದ ಟೋಲ್ ಶುಲ್ಕವನ್ನೂ ಸಂಗ್ರಹಿಸಿದೆ, ರೈತರಿಗೆ ಪರಿಹಾರ ನೀಡದೇ ಭೂಮಿ ವಶಕ್ಕೆ ಪಡೆದಿದೆ. ಸರ್ಕಾರ ಕೂಡ ನೈಸ್ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೈಕೋರ್ಟ್ನ ಈ ತೀರ್ಪಿನಿಂದ ನೈಸ್ ರಸ್ತೆಗಾಗಿ ಭೂಸ್ವಾಧೀನಕ್ಕೆ ಒಳಗಾಗಿದ್ದ ನೂರಾರು ರೈತರಿಗೆ ಮಹತ್ವದ ನ್ಯಾಯಾಂಗದ ಬೆಂಬಲ ದೊರೆತಂತಾಗಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳು ಹಾಗೂ ತನಿಖೆಯ ಮೇಲೆ ಇದೀಗ ಎಲ್ಲರ ಗಮನ ನೆಟ್ಟಿದೆ.

