ಬೆಂಗಳೂರು-ದೇಶದ ಇತರ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರೌಢಶಾಲೆ ಅಂದರೆ 9 ಮತ್ತು 10ನೇ ತರಗತಿ ಹಂತದಲ್ಲಿ ಶಾಲೆ ತೊರೆಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಕೇಂದ್ರ ಸರ್ಕಾರದ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ. ಲೋಕಸಭೆಯಲ್ಲಿ ಮಂಡಿಸಲಾದ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್ (UDISE+)ನ ಹೊಸ ದತ್ತಾಂಶವು ಈ ಆತಂಕಕಾರಿ ವಿಷಯವನ್ನ ಬಹಿರಂಗಪಡಿಸಿದೆ.
ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಹೆಣ್ಣು ಮಕ್ಕಳು ಶಾಲೆ ತೊರೆಯುತ್ತಿರುವ ಪ್ರಮಾಣದಲ್ಲಿ ಒಂದಿಷ್ಟು ಸುಧಾರಣೆ ಕಂಡುಬಂದಿದೆಯಾದರೂ, ದೇಶದ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೇ ಇಂದಿಗೂ ಮೊದಲ ಸ್ಥಾನದಲ್ಲಿದೆ ಎಂಬುದು ಎಲ್ಲರ ಕಳವಳಕ್ಕೆ ಕಾರಣವಾಗಿದೆ.
ಲೋಕಸಭೆಯಲ್ಲಿ ಸಲ್ಲಿಕೆಯಾಗಿರುವ 2025-26ರ ಶೈಕ್ಷಣಿಕ ಸಾಲಿನ ಯುಡಿಐಎಸ್‌ಇ+ ದತ್ತಾಂಶದ ಪ್ರಕಾರ, ಕರ್ನಾಟಕದಲ್ಲಿ ಪ್ರೌಢಶಾಲೆ ಹಂತದಲ್ಲಿ ಶೇ. 13.9ರಷ್ಟು ಹೆಣ್ಣು ಮಕ್ಕಳು ಅರ್ಧಕ್ಕೇ ಶಿಕ್ಷಣವನ್ನು ಮೊಟಕುಗೊಳಿಸಿ ಶಾಲೆಯಿಂದ ಹೊರಗುಳಿದಿದ್ದಾರೆ. ದೇಶದ ಸರಾಸರಿ ಶಾಲಾ ಡ್ರಾಪ್‌ಔಟ್ ಪ್ರಮಾಣ ಶೇ. 8ರಷ್ಟಿದ್ದರೆ, ಕರ್ನಾಟಕದ ಅಂಕಿ-ಅಂಶವು ರಾಷ್ಟ್ರೀಯ ಸರಾಸರಿಗಿಂತ ಬಹುತೇಕ ಹೆಚ್ಚಿದೆ.
ವರ್ಷಗಳ ಅಂಕಿ-ಅಂಶಗಳ ನೋಟ
ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸುವುದಾದರೆ, 2023-24ರಲ್ಲಿ ಶೇ. 19.6ರಷ್ಟಿದ್ದ ಹೆಣ್ಣು ಮಕ್ಕಳ ಡ್ರಾಪ್‌ಔಟ್ ಪ್ರಮಾಣವು 2024-25ರಲ್ಲಿ ಶೇ. 14.6ಕ್ಕೆ ಹಾಗೂ 2025-26ರಲ್ಲಿ ಶೇ. 13.9ಕ್ಕೆ ಕುಸಿದಿದೆ. ಅಂದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ರಾಷ್ಟ್ರಮಟ್ಟದ ಪ್ರಗತಿಯ ವೇಗಕ್ಕೆ ಹೋಲಿಸಿದರೆ ಕರ್ನಾಟಕದ ಸುಧಾರಣೆಯ ವೇಗ ಅತ್ಯಂತ ಮಂದಗತಿಯಲ್ಲಿದೆ ಎನ್ನಬಹುದು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಶೇ. 15.6ರಷ್ಟು ಡ್ರಾಪ್‌ಔಟ್ ದರದೊಂದಿಗೆ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕವೇ ಮೊದಲ ಸ್ಥಾನದಲ್ಲಿ ಇದು ಬೇಸರದ ಸಂಗತಿ.
ಇತರ ರಾಜ್ಯಗಳಲ್ಲಿ ಹೇಗಿದೆ?
ಇತರ ರಾಜ್ಯಗಳ ಹೋಲಿಕೆ
ದೇಶಾದ್ಯಂತ ಹೆಣ್ಣು ಮಕ್ಕಳು ಶಾಲೆ ತೊರೆಯುತ್ತಿರುವ ಪ್ರಮಾಣವು 2023-24ರಲ್ಲಿ ಶೇ. 12.6ರಷ್ಟಿದ್ದು, 2024-25ರಲ್ಲಿ ಶೇ. 9.6 ಹಾಗೂ 2025-26ರಲ್ಲಿ ಶೇ. 8ಕ್ಕೆ ಇಳಿಕೆಯಾಗಿದೆ. ಉತ್ತರ ಭಾರತದ ಪ್ರಮುಖ ರಾಜ್ಯವಾದ ಬಿಹಾರವು ಈ ನಿಟ್ಟಿನಲ್ಲಿ ಅಚ್ಚರಿ ಮೂಡಿಸುವಂತಹ ಸುಧಾರಣೆ ಕಂಡಿದೆ. 2023-24ರಲ್ಲಿ ಬಿಹಾರದಲ್ಲಿ ಬರೋಬ್ಬರಿ ಶೇ. 25.1ರಷ್ಟಿದ್ದ ಹೆಣ್ಣು ಮಕ್ಕಳ ಡ್ರಾಪ್‌ಔಟ್ ಪ್ರಮಾಣವು 2025-26ರ ವೇಳೆಗೆ ಶೇ. 9.1ಕ್ಕೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.
ಅಂತೆಯೇ ಉತ್ತರ ಪ್ರದೇಶವು ಕಳೆದ ಕೆಲ ವರ್ಷಗಳಿಂದ ಶೇ. 7.3ರಷ್ಟು ದರವನ್ನು ಕಾಯ್ದುಕೊಂಡು ಬಂದಿದೆ. ದೊಡ್ಡ ರಾಜ್ಯಗಳ ಪೈಕಿ ಅಸ್ಸಾಂ ಶೇ. 13.9ರಷ್ಟು ದರದೊಂದಿಗೆ ಕರ್ನಾಟಕಕ್ಕೆ ಸಮಾನವಾದ ಸ್ಥಾನದಲ್ಲಿದ್ದರೆ, ಗುಜರಾತ್ ಶೇ. 13.3ರಷ್ಟು ದರ ದಾಖಲಿಸಿದೆ. ದಕ್ಷಿಣ ಭಾರತದ ನೆರೆಯ ರಾಜ್ಯಗಳಾದ ಕೇರಳ (ಶೇ. 3) ಹಾಗೂ ತಮಿಳುನಾಡು (ಶೇ. 3.2) ಅತ್ಯಂತ ಕಡಿಮೆ ಡ್ರಾಪ್‌ಔಟ್ ದರ ಹೊಂದುವ ಮೂಲಕ ಮಾದರಿಯಾಗಿವೆ. ಹರಿಯಾಣದಲ್ಲೂ ಇದು ಶೇ. 3.8ರಷ್ಟಿದೆ.
ಕಾರಣಗಳು ಮತ್ತು ಪರಿಹಾರ
ಸಾಕ್ಷರತೆಯಲ್ಲಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಂತಹ ರಾಜ್ಯದಲ್ಲಿ ಪ್ರೌಢಶಾಲೆ ಹಂತದಲ್ಲೇ ಹೆಣ್ಣು ಮಕ್ಕಳು ಶಿಕ್ಷಣ ತೊರೆಯುತ್ತಿರುವುದು ಶಿಕ್ಷಣ ತಜ್ಞರಲ್ಲಿ ಆತಂಕ ಮೂಡಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ, ಸಾಮಾಜಿಕ ಕಾರಣಗಳು, ಆರ್ಥಿಕ ಸಂಕಷ್ಟ ಹಾಗೂ ಸೂಕ್ತ ಸಾರಿಗೆ ಸೌಲಭ್ಯಗಳಿಲ್ಲದಿರುವುದು ಹೆಣ್ಣು ಮಕ್ಕಳು ಶಾಲೆ ತೊರೆಯಲು ಮುಖ್ಯ ಕಾರಣಗಳಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ವಿಶೇಷ ಗಮನಹರಿಸಿ, ಹೆಣ್ಣು ಮಕ್ಕಳ ಉಚಿತ ಶಿಕ್ಷಣಕ್ಕೆ ಪೂರಕ ಯೋಜನೆಗಳನ್ನು ರೂಪಿಸುವುದು ಹಾಗೂ ತಳಮಟ್ಟದಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮಾದರಿಯನ್ನು ಅಧ್ಯಯನ ಮಾಡಿ, 9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರು ಶಾಲೆಯಲ್ಲೇ ಉಳಿಯುವಂತೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

