ಬೆಂಗಳೂರು: ಕೆಪಿಎಸ್‌ಸಿ ( ಕರ್ನಾಟಕ ಲೋಕಸೇವಾ ಆಯೋಗ ) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಎಸ್. ಸಾಹುಕಾರ ಅಮಾನತುಗೊಂಡಿರುವ ಬೆನ್ನಲ್ಲೇ ಇದೀಗ ಕೆಪಿಎಸ್ ಸಿ ಮಾಜಿ ಸದಸ್ಯೆಯ ಸರದಿ. ಹುದ್ದೆಗಾಗಿ ಲಂಚ ಆರೋಪದಲ್ಲಿ ಮಾಜಿ ಸದಸ್ಯೆ ಶಾಂತಾ ಹೊಸಮನಿ ಮತ್ತು ಅಭ್ಯರ್ಥಿ ಕಲಬುರಗಿ ಮೂಲದ ಮಮಿತಾ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಶಾಂತಾ ಹೊಸಮನಿ ಹಾಗೂ ಅಭ್ಯರ್ಥಿ ಮಮಿತಾ ವಿರಿದ್ಧ ಎಫ್ ಐಆರ್ ದಾಖಲಾಗಿದೆ. ಕೆಎಎಸ್ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಮಮಿತಾ ಅವರು ಹುದ್ದೆ ಗಿಟ್ಟಿಸಿಕೊಳ್ಳಲು ಕೆಪಿಎಸ್‌ಸಿ ಸದಸ್ಯರನ್ನು ಸಂಪರ್ಕಿಸಿದ್ದಾರೆ ಎಂದು ಆರೋಪಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಅವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು.
ದೂರನ್ನು ಆಧರಿಸಿ ಕೆಪಿಎಸ್‌ಸಿಯಿಂದ ದಾಖಲಾತಿಗಳನ್ನು ಪಡೆದು ಪ್ರಾಥಮಿಕ ವಿಚಾರಣೆ ನಡೆಸಿದಾಗ, ಗಂಭೀರ ಸ್ವರೂಪದ ಅಪರಾಧ ಕಂಡುಬಂದಿರುವುದರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಕೆಎಎಸ್ ಹುದ್ದೆ ಗಿಟ್ಟಿಸಿಕೊಳ್ಳಲು ಅಕ್ರಮವಾಗಿ ಹಣ ನೀಡಲು ಅಭ್ಯರ್ಥಿ ಮಮಿತಾ ಮುಂದಾಗಿದ್ದಾರೆ. ಸಂದರ್ಶನ ಎದುರಿಸಿರುವ ಮಮಿತಾ, ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದಾರೆ. ಈ ಅಕ್ರಮ ವ್ಯವಹಾರಕ್ಕೆ ಮಮಿತಾ ಅವರು ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿಯವರ ಜೊತೆ ಸಂಪರ್ಕದಲ್ಲಿರುವ ಬಗ್ಗೆಯೂ ಮಾಹಿತಿ ಬಂದಿದೆ. ಆದ್ದರಿಂದ ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆಚ್ ದೂರುದಾರ ಕಾಂತಕುಮಾರ್ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

