ಬೆಂಗಳೂರು: ರಾಜ್ಯಾದ್ಯಂತ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆ ಕೆಲ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಉಷ್ಣ ಅಲೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಬಿಸೊಲ ತಾಪಕ್ಕೆ ರಾಯಚೂರಿನಲ್ಲಿ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ಮನುಷ್ಯರನ್ನು ಮಾತ್ರವಲ್ಲ ರಣ ಬಿಸಿಲ ಝಳಕ್ಕೆ ಮೂಕ ಪ್ರಾಣಿಗಳು ಕೂಡ ಸಾವನ್ನಪ್ಪುತ್ತಿವೆ.
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳಿಗ್ಗೆ ಏಳುಗಂಟೆಯಿಂದಲೇ ಸುಡು ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಳೆದ ಹಲವು ದಿನಗಳಿಂದ ಹೀಟ್ ವೇವ್ ಅಲರ್ಟ್ ನೀಡಲಾಗಿತ್ತು ಇತ್ತು. ಅದರ ಜೊತೆಗೆ ಸಾಧಾರಣ ಮಳೆಯೂ ಅಲ್ಲಲ್ಲಿ ಕಂಡು ಬರುತ್ತಿತ್ತು. ಆದರೆ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ.
ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದ ಗಾಳಿಯ ಜೊತೆಗೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರು ಜಿಲೆಗಳಲ್ಲಿ ಆರೇಂಜ್ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಒಂದೆಡೆ ರಣ ಬಿಸಿಲು ಹೆಚ್ಚುತ್ತಿದ್ದರೆ ಮತ್ತೊಂದೆಡೆ ಕೆಲ ಜಿಲ್ಲೆಗಳಲ್ಲಿ ಬಿರುಗಾಳಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ರಾಯಚೂರಿನಲ್ಲಿ ಧಾರಾಕಾರ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ.

