ವಡೋದರಾ:ಗುಜರಾತ್‌ನ ವಡೋದರದಲ್ಲಿ ದಾರುಣ ಘಟನೆ ನಡೆದಿದ್ದು, ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬಸ್‌ನ ಹೈಡ್ರಾಲಿಕ್ ಬಾಗಿಲಿಗೆ ಕುತ್ತಿಗೆ ಸಿಲುಕಿಕೊಂಡು 7 ವರ್ಷದ ಬಾಲಕ ದಿವ್ಯೇಶ್ ರಾಥ್ವಾ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೃತ ಬಾಲಕನನ್ನು ದಿವ್ಯೇಶ್ ರಾಥ್ವಾ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಗ್ಯಾರೇಜ್ ಸಮೀಪ ಆಟವಾಡುತ್ತಿದ್ದ ಬಾಲಕ, ಅಲ್ಲಿದ್ದ ನಿಲ್ಲಿಸಿದ್ದ ಬಸ್‌ನೊಳಗೆ ಹೋಗಿದ್ದ. ಈ ವೇಳೆ ಬಸ್‌ನ ಬಾಗಿಲು ಏಕಾಏಕಿ ಮುಚ್ಚಿಕೊಂಡಿದ್ದು, ಬಾಲಕನ ಕುತ್ತಿಗೆ ಅದರ ನಡುವೆ ಸಿಲುಕಿಕೊಂಡಿದೆ.
ಘಟನೆ ಕುರಿತು ಅಪಘಾತದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಅಭಿಷೇಕ್ ಗುಪ್ತಾ ತಿಳಿಸಿದ್ದಾರೆ.
ದಿವ್ಯೇಶ್‌ನ ತಂದೆ-ತಾಯಿ ಕಾರ್ಮಿಕರಾಗಿದ್ದು, ಗ್ಯಾರೇಜ್‌ನ ಹಿಂಭಾಗದಲ್ಲಿರುವ ವಸತಿಯಲ್ಲಿ ವಾಸಿಸುತ್ತಿದ್ದರು. ಮತ್ತೊಂದು ಮಾಹಿತಿಯ ಪ್ರಕಾರ, ಬಾಲಕ ಮಾರುಕಟ್ಟೆಗೆ ಹೋಗುವುದಾಗಿ ತಾಯಿಗೆ ಹೇಳಿ ಮನೆಯಿಂದ ಹೊರಬಂದಿದ್ದ. ಆದರೆ ಬಹಳ ಸಮಯವಾದರೂ ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದ್ದರು.
ಕೊನೆಗೆ ಗ್ಯಾರೇಜ್‌ನಲ್ಲಿದ್ದ ಬಸ್‌ನಲ್ಲಿ ಬಾಲಕ ಸಿಲುಕಿರುವುದು ಪತ್ತೆಯಾಗಿದೆ. ಗ್ಯಾರೇಜ್‌ನ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ವ್ಯಕ್ತಿಗಳು ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿರುವುದು ಕಂಡುಬಂದಿದೆ. ಬಾಲಕ ಸಿಲುಕಿರುವುದನ್ನು ಗಮನಿಸಿದ ಅವರು ಬಸ್‌ನ ಬಾಗಿಲನ್ನು ಬಲವಂತವಾಗಿ ತೆರೆದಿದ್ದಾರೆ.
ಆದರೆ ಅಷ್ಟರಲ್ಲಾಗಲೇ ಬಾಲಕ ಪ್ರಜ್ಞಾಹೀನನಾಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರೀಕ್ಷಿಸಿದ ಬಳಿಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
https://twitter.com/i/status/2090427724863340947

