ಬೆಂಗಳೂರು- ರಾಜ್ಯ ರಾಜಕೀಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ವಿಧಾನಸಭೆಯ ಸಭಾಧ್ಯಕ್ಷ, ಉಪಸಭಾಧ್ಯಕ್ಷ ಹಾಗೂ ವಿಧಾನಪರಿಷತ್‌ನ ಸಭಾಪತಿ ಮತ್ತು ಉಪಸಭಾಪತಿ ಸ್ಥಾನಗಳಿಗೆ ಹೊಸಬರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಅನುಮೋದನೆ ನೀಡಿದೆ. ಸಂಪುಟ ಪುನಾರಚನೆ ಹಾಗೂ ರಾಜೀನಾಮೆಗಳಿಂದ ತೆರವಾದ ಪ್ರಮುಖ ಸಾಂವಿಧಾನಿಕ ಸ್ಥಾನಗಳಿಗೆ ಹೈಕಮಾಂಡ್ ಅಂತಿಮ ಮುದ್ರೆ ಒತ್ತಿದೆ.
ನೂತನ ನೇಮಕಾತಿಗಳ ವಿವರ
ಪ್ರಮುಖ ಹುದ್ದೆಗಳು ಮತ್ತು ನೂತನ ಅಭ್ಯರ್ಥಿಗಳ ವಿವರ:
ವಿಧಾನಸಭಾಧ್ಯಕ್ಷರು (Speaker)- ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್
ವಿಧಾನಸಭೆ ಉಪಸಭಾಧ್ಯಕ್ಷರು (Deputy Speaker)- ಶಾಸಕ ಎ.ಎಸ್. ಪೊನ್ನಣ್ಣ
ವಿಧಾನಪರಿಷತ್ ಸಭಾಪತಿಗಳು (Chairman)- ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್
ವಿಧಾನಪರಿಷತ್ ಉಪಸಭಾಪತಿಗಳು (Deputy Chairman- ಮಾಜಿ ಸಚಿವೆ ಉಮಾಶ್ರೀ
ತೆರವಾದ ಹುದ್ದೆಗಳ ಹಿನ್ನೆಲೆ
ಇದುವರೆಗೆ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್ ಅವರು ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಉಪಸಭಾಧ್ಯಕ್ಷರಾಗಿದ್ದ ರುದ್ರಪ್ಪ ಮಾನಪ್ಪ ಲಮಾಣಿ ಕೂಡ ಇಂದು ಸಂಜೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಕಾರಣದಿಂದ ವಿಧಾನಸಭೆಯ ಉಭಯ ಪ್ರಮುಖ ಸ್ಥಾನಗಳು ತೆರವಾಗಿದ್ದವು.
ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಮುಖ ನ Aಗರಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಹಳೆ ಮೈಸೂರು ಹಾಗೂ ದಕ್ಷಿಣ ಕರ್ನಾಟಕ ಭಾಗಕ್ಕೆ ಸೇರಿದವರಾಗಿರುವುದರಿಂದ, ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಜಿ.ಎಸ್. ಪಾಟೀಲ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಮತ್ತು ಸಲೀಂ ಅಹಮದ್ ಅವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಅಲ್ಲದೆ, ಯು.ಟಿ. ಖಾದರ್ ಅವರು ನಿರ್ಗಮಿಸಿದ ಅದೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಲೀಂ ಅಹಮದ್ ಅವರಿಗೆ ಸಭಾಪತಿ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ. ಉಪಸಭಾಪತಿಯಾಗಲಿರುವ ಉಮಾಶ್ರೀಯವರೂ ಕೂಡ ಉತ್ತರ ಕರ್ನಾಟಕ ಭಾಗದವರೇ ಆಗಿದ್ದಾರೆ.
ಸ್ಪೀಕರ್ ಆಯ್ಕೆಯಲ್ಲಿ ಅಚ್ಚರಿಯ ತಿರುವು
ಸಂಪುಟ ವಿಸ್ತರಣೆ ಮತ್ತು ಹುದ್ದೆಗಳ ಬದಲಾವಣೆ ಕುರಿತು ಚರ್ಚೆಗಳು ನಡೆದಾಗ, ವಿಧಾನಸಭಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಹಿರಿಯ ಶಾಸಕರಾದ ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಆರ್.ವಿ. ದೇಶಪಾಂಡೆ ಹಾಗೂ ದಿನೇಶ್ ಗುಂಡೂರಾವ್ ಅವರ ಹೆಸರುಗಳು ಭರ್ಜರಿಯಾಗಿ ಚಲಾವಣೆಯಲ್ಲಿದ್ದವು.
ಆದರೆ, ಹೈಕಮಾಂಡ್ ಬಿಡುಗಡೆ ಮಾಡಿರುವ ಅಂತಿಮ ಪಟ್ಟಿಯಲ್ಲಿ ಈ ಹಿರಿಯ ನಾಯಕರ ಹೆಸರುಗಳಾವುವೂ ಇಲ್ಲದೆ, ಅಚ್ಚರಿಯೆಂಬಂತೆ ಜಿ.ಎಸ್. ಪಾಟೀಲ್ (ಇವರು ಹಿರಿಯ ರಾಜಕಾರಣಿ ಎಚ್.ಕೆ. ಪಾಟೀಲ್ ಅವರ ಹತ್ತಿರದ ಸಂಬಂಧಿ) ಅವರ ಹೆಸರು ಮುಂಚೂಣಿಗೆ ಬಂದಿದೆ. ಈ ಅನಿರೀಕ್ಷಿತ ಬದಲಾವಣೆಯು ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

