ಬೆಂಗಳೂರು-ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಸಚಿವ ಸಂಪುಟ ವಿಸ್ತರಣೆಯು ಪಕ್ಷದೊಳಗೆ ತೀವ್ರ ರಾಜಕೀಯ ಸಂಚಲನ ಮೂಡಿಸಿದೆ. ಹೈಕಮಾಂಡ್ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ, ನಿರೀಕ್ಷೆಯಂತೆ ಸಚಿವ ಸ್ಥಾನ ವಂಚಿತರಾದ ನಾಯಕರ ಬೆಂಬಲಿಗರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದು, ರಾಜ್ಯ ರಾಜಕಾರಣದಲ್ಲಿ ಬಂಡಾಯದ ಕಾರ್ಮೋಡ ಕವಿದಿದೆ.
ತನ್ವೀರ್ ಸೇಠ್ ಬೆಂಬಲಿಗರ ಆಕ್ರೋಶ
ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ತನ್ವೀರ್ ಸೇಠ್ ಅವರ ಮೇಲೆಯೇ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷವನ್ನೇ ತ್ಯಜಿಸುವಂತೆ ಬೆಂಬಲಿಗರು ಏರಿದ ಧ್ವನಿಯಲ್ಲಿ ಒತ್ತಡ ಹೇರಿದ್ದಾರೆ.
ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ತಪ್ಪಿದ ಮನನೊಂದು ಅವರ ಅಭಿಮಾನಿಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಗಂಭೀರ ಘಟನೆ ವರದಿಯಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್, “ತಮಗೆ ನಿರಾಶೆಯಾಗಿರುವುದು ನಿಜ, ಆದರೆ ಯಾರೂ ವಿಪರೀತ ನಿರ್ಧಾರ ತೆಗೆದುಕೊಳ್ಳಬೇಡಿ” ಎಂದು ಮನವಿ ಮಾಡಿದ್ದಾರೆ. ಪಕ್ಷದ ವಿರೋಧಿ ಚಟುವಟಿಕೆ ನಡೆಸಿದವರಿಗೆ ಮಣೆ ನೀಡಲಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಸಂಪುಟ ರಚನೆಯಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಸಮತೋಲನದ ಲೆಕ್ಕಾಚಾರವು ಹಲವು ಹಿರಿಯ ಮತ್ತು ಪ್ರಭಾವಿ ನಾಯಕರಿಗೆ ನಿರಾಶೆಯನ್ನುಂಟು ಮಾಡಿದೆ.
ಜಿಲ್ಲಾವಾರು ನಿರಾಶೆಯ ಚಿತ್ರಣ
ಉತ್ತರ ಕರ್ನಾಟಕ:
ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಪೈಪೋಟಿ ಇದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಪಿ.ಎಂ.ಅಶೋಕ್, ಗಣೇಶ್ ಹುಕ್ಕೇರಿ, ಆಸೀಫ್ ಸೇಠ್, ಮಹತೇಂಶ್ ಕೌಜಲಗಿ ಅವರಿಗೆ ಅವಕಾಶ ಸಿಗದಿರುವುದು ಅಚ್ಚರಿ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಆರ್.ಬಿ.ತಿಮಾಪೂರ್, ಅಪ್ಪಾಜಿ ನಾಡಗೌಡ, ಶಿವಾನಂದ ಪಾಟೀಲ್, ಎಂ.ವೈ.ಪಾಟೀಲ್, ಕನೀಜ್ ಫಾತಿಮಾ ಮುಂತಾದ ಪ್ರಮುಖ ಆಕಾಂಕ್ಷಿಗಳಿಗೆ ನಿರಾಶೆಯಾಗಿದೆ. ಗದಗ ಜಿಲ್ಲೆಯಲ್ಲಿ ಜಿ.ಎಸ್.ಪಾಟೀಲ್ ಅವರನ್ನು ಸಂಪುಟದ ಬದಲಾಗಿ ವಿಧಾನ ಸಭಾಧ್ಯಕ್ಷರನ್ನಾಗಿ ಪರಿಗಣಿಸಲು ಹೈಕಮಾಂಡ್ ನಿರ್ಧರಿಸಿದೆ.
ಹುಬ್ಬಳ್ಳಿ-ಧಾರವಾಡದಿಂದ ಸಂತೋಷ್ ಲಾಡ್ಗೆ ಮಣೆ ನೀಡಿ, ಎನ್.ಎಚ್.ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ ಅವರನ್ನು ಕಡೆಗಣಿಸಲಾಗಿದೆ. ಹಿರಿಯ ನಾಯಕ, 9 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆ ಹಾಗೂ ಉತ್ತರ ಕನ್ನಡದ ಮಂಕಾಳ ವೈದ್ಯ ಅವರಿಗೂ ಕೊನೇ ಕ್ಷಣದಲ್ಲಿ ಅವಕಾಶ ತಪ್ಪಿದೆ.
ಹಾವೇರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಕೋಲಾರ, ಮಂಡ್ಯ ಮತ್ತು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಟಿ.ಬಿ.ಜಯಚಂದ್ರ, ಎಂ.ಕೃಷ್ಣಪ್ಪ, ಎನ್.ಎ.ಹ್ಯಾರಿಸ್, ಶರತ್ ಬಚ್ಚೇಗೌಡ ಸೇರಿದಂತೆ ಹಂಡಿಗಟ್ಟಲೆ ಪ್ರಬಲ ಆಕಾಂಕ್ಷಿಗಳು ಸಚಿವ ಸ್ಥಾನ ವಂಚಿತರಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ತೀವ್ರ ಲಾಬಿ ನಡೆಸಿದ್ದವರನ್ನು ಬದಿಗಿಟ್ಟು ಗಾಯತ್ರಿ ಶಾಂತೇಗೌಡ ಅವರಿಗೆ ಹೈಕಮಾಂಡ್ ಅವಕಾಶ ಕಲ್ಪಿಸಿದೆ.
ಕಾಂಗ್ರೆಸ್ಗೆ ಒಗ್ಗಟ್ಟಿನ ಪರೀಕ್ಷೆ
ಈ ಹಿಂದೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಪ್ರಬಲ ನಾಯಕರು ಮತ್ತು ಅವರ ಬೆಂಬಲಿಗರ ಈ ತೀವ್ರ ಆಕ್ರೋಶವು ಕಾಂಗ್ರೆಸ್ ಪಕ್ಷಕ್ಕೆ ಒಗ್ಗಟ್ಟಿನ ಪರೀಕ್ಷೆಯೊಡ್ಡಿದೆ. ಹೈಕಮಾಂಡ್ನ ಈ ಪಟ್ಟಿಯು ಒಂದು ಕಡೆ ಹೊಸಮುಖಗಳಿಗೆ ಅವಕಾಶ ಕಲ್ಪಿಸುವ ತಂತ್ರವಾಗಿದ್ದರೂ, ಮತ್ತೊಂದೆಡೆ ಹಿರಿಯ ಶಾಸಕರ ಅಸಮಾಧಾನವನ್ನು ಶಮನಗೊಳಿಸುವುದು ಮುಖಂಡರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿಭಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಭಿನ್ನಮತವನ್ನು ಶಮನ ಮಾಡಲು ನಾಯಕರು ಸಂಧಾನ ಸೂತ್ರಗಳನ್ನು ಹೆಣೆಯಬೇಕಾದ ತುರ್ತು ಅಗತ್ಯವಿದೆ.

