HomeFeatured News2026ರಲ್ಲಿ ಕರ್ನಾಟಕದಲ್ಲಿ ಸಾಲು-ಸಾಲು ಚುನಾವಣೆಗಳು!

2026ರಲ್ಲಿ ಕರ್ನಾಟಕದಲ್ಲಿ ಸಾಲು-ಸಾಲು ಚುನಾವಣೆಗಳು!

2026ನೇ ವರ್ಷ ಪ್ರಾರಂಭವಾಗಿದೆ. ಜನರು ಹೊಸ ಹೊಸ ತೀರ್ಮಾನಗಳನ್ನು ಕೈಗೊಂಡು ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಈ ವರ್ಷ ಕರ್ನಾಟಕದ ರಾಜಕೀಯ ನಾಯಕರು ಬ್ಯುಸಿಯಾಗಲಿದ್ದಾರೆ. ಇದಕ್ಕೆ ಕಾರಣ ಸಾಲು-ಸಾಲು ಚುನಾವಣೆಗಳು.

2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 2025ರ ನವೆಂಬರ್ 20ಕ್ಕೆ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸಿದೆ.

ಕಾಂಗ್ರೆಸ್ ಸರ್ಕಾರದ ಅವಧಿ ಇನ್ನೂ ಎರಡೂವರೆ ವರ್ಷವಿದೆ. ಆದರೆ ಈ ವರ್ಷ ರಾಜ್ಯದಲ್ಲಿ ಸಾಲು ಸಾಲು ಚುನಾವಣೆ ಇದ್ದು, ರಾಜಕೀಯ ಪಕ್ಷಗಳು ತಯಾರಿಯನ್ನು ಆರಂಭಿಸಿವೆ. ಈ ವರ್ಷ ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸೇರಿ ವಿವಿಧ ಚುನಾವಣೆಗಳು ನಡೆಯಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಪ ಚುನಾವಣೆಗಳು: ನವೆಂಬರ್‌ನಲ್ಲಿ ಮಾಜಿ ಸಚಿವ, ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ವೈ ಮೇಟಿ (79) ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

ಹಾಲಿ ಶಾಸಕರು ಮೃತಪಟ್ಟರೆ ಚುನಾವಣಾ ಆಯೋಗ 6 ತಿಂಗಳಿನಲ್ಲಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಬೇಕಿದೆ. ಆದ್ದರಿಂದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೆಚ್.ವೈ.ಮೇಟಿ 79,336 ಮತಗಳನ್ನು ಪಡೆದು ಜಯಗಳಿಸಿದ್ದರು. ಎದುರಾಳಿಯಾಗಿದ್ದ ಬಿಜೆಪಿಯ ವೀರಣ್ಣ ಚಿರಂತಿಮಠ 73,458 ಮತಗಳನ್ನು ಪಡೆದಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಚಿರಂತಿಮಠ ಮಲ್ಲಿಕಾರ್ಜುನ 10,116 ಮತಗಳನ್ನು ಪಡೆದಿದ್ದರು.

ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ನಡೆಯಬೇಕಿದೆ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ (94) ಡಿಸೆಂಬರ್‌ನಲ್ಲಿ ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ದೇಶದ ಹಿರಿಯ ಶಾಸಕ ಎನಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. 2008ರ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಅಸ್ತಿತ್ವಕ್ಕೆ ಬಂದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ 4 ಬಾರಿ ಚುನಾವಣೆ ನಡೆದಿದ್ದು, ನಾಲ್ಕು ಸಲವು ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದರು.

ದಾವಣಗೆರೆ ದಕ್ಷಿಣ ಕಾಂಗ್ರೆಸ್‌ನ ಭದ್ರಕೋಟೆ ಎಂದು ಹೇಳಲಾಗುತ್ತದೆ. 2023ರ ಚುನಾವಣೆಯಲ್ಲಿ 84,298 ಮತಗಳನ್ನು ಪಡೆದು ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದವರು ಬಿ.ಜೆ.ಅಜಯ್ ಕುಮಾರ್.

ಜಿಬಿಎ ಚುನಾವಣೆ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಎಂದು ಬದಲಾವಣೆ ಮಾಡಿದೆ. ಸದ್ಯ ಬೆಂಗಳೂರು ನಗರ 5 ನಗರ ಪಾಲಿಕೆಯಾಗಿ ವಿಭಾಗವಾಗಿದ್ದು, 369 ವಾರ್ಡ್‌ಗಳಿವೆ.

ಜಿಬಿಎ ಚುನಾವಣೆಗೆ ಈಗಾಗಲೇ ತಯಾರಿಯನ್ನು ಆರಂಭಿಸಲಾಗಿದೆ. 2026ರಲ್ಲಿ ಚುನಾವಣೆ ನಡೆಯುವುದು ಖಚಿತವಾಗಿದೆ. ಬೆಂಗಳೂರಿನ ಆಡಳಿತವನ್ನು ಕೈವಶ ಮಾಡಿಕೊಳ್ಳಲು ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ತಂತ್ರವನ್ನು ರೂಪಿಸುತ್ತಿವೆ.

ಜಿಬಿಎ ಮಾತ್ರವಲ್ಲ ಕರ್ನಾಟಕದ 5 ಮಹಾನಗರ ಪಾಲಿಕೆಗಳಿಗೂ ಸಹ ಈ ವರ್ಷ ಚುನಾವಣೆ ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಭಾವ ಎಷ್ಟಿದೆ? ಎಂದು ತಿಳಿಯಲು ಈ ಚುನಾವಣೆ ಸಹಾಯಕವಾಗಲಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ: ಕರ್ನಾಟಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು, ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳಿಗೆ ಈ ವರ್ಷ ಚುನಾವಣೆ ನಡೆಯಬೇಕಿದೆ.

239 ತಾಲೂಕುಗಳ 3,671 ಕ್ಷೇತ್ರಗಳು. 31 ಜಿಲ್ಲೆಗಳು 1,130 ಕ್ಷೇತ್ರಗಳು, ಗ್ರಾಮ ಪಂಚಾಯಿತಿಯ 6000 + ವಾರ್ಡ್‌ಗಳು, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿ 185 ಕ್ಷೇತ್ರಗಳಿಗೆ ಚುನಾವಣೆಗಳು ನಡೆಯಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular