ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ವಿವಿಧ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸೆಪ್ಟೆಂಬರ್ 20ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸೋಮವಾರ ಬಿಡುಗಡೆ ಮಾಡಿದೆ.
ಪ್ರಕಟಿಸಲಾದ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರ ಬೆಳಿಗ್ಗೆ 10.30 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, ಸಾರ್ವಜನಿಕರು ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಸಂಖ್ಯೆ ಮತ್ತು ಪೂರಕ ದಾಖಲೆಗಳ ಸಹಿತವಾಗಿ www.veto linekarnataka.gov.in/kea ವೆಬ್ಸೈಟ್ ಮೂಲಕ ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿದೆ.
ಸಲ್ಲಿಸಲಾದ ಪ್ರತಿ ಆಕ್ಷೇಪಣೆಗೆ 25 ರೂ. ಶುಲ್ಕ ಪಾವತಿ ಕಡ್ಡಾಯವಾಗಿದ್ದು, ನಿಗದಿತ ದಾಖಲೆ ಇಲ್ಲದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿ ಆಕ್ಷೇಪಣೆ ಪರಿಶೀಲಿಸಿ ತೀರ್ಮಾನಿಸುವ ಈ ಉತ್ತರಗಳು ಅಂತಿಮವಾಗಿರುತ್ತವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಸೆ. 29 ಮತ್ತು 30 ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟ
ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ ವತಿಯಿಂದ 2026-27ನೇ ಸಾಲಿನ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟವನ್ನು ಸೆಪ್ಟೆಂಬರ್ 29 ಮತ್ತು 30 ರಂದು ಶ್ರೀ ಕಂಠೀರವ ಕ್ರೀಡಾಂಗಣ ಹಾಗೂ ಇತರೆ ಮೈದಾನಗಳಲ್ಲಿ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ, ಪದಕ ಮತ್ತು ಟ್ರೋಫಿ ನೀಡಲಾಗುವುದು ಹಾಗೂ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರನ್ನು ನಿಯೋಜಿಸಲಾಗುವುದು.
ಈ ಕ್ರೀಡಾಕೂಟವು ಯಾವುದೇ ವಯೋಮಿತಿ ನಿರ್ಬಂಧವಿಲ್ಲ. ಎಲ್ಲಾ ವಯೋಮಿತಿಯುಳ್ಳ ಪುರುಷ ಮತ್ತು ಮಹಿಳೆಯರು ಭಾಗವಹಿಸಬಹುದು. ಬೆಂಗಳೂರು ನಗರ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಕ್ರೀಡಾ ಪಟುಗಳು ವೆಬ್ಸೈಟ್ ಪೋರ್ಟಲ್ https://dasaracmcup.in/ ರಲ್ಲಿ ಸೆಪ್ಟೆಂಬರ್ 25 ರ ಸಂಜೆ 5.30ರ ಒಳಗಾಗಿ ನೊಂದಾಯಿಸಿಕೊಳ್ಳಬಹುದು. ಸ್ಥಳದಲ್ಲಿಯೇ ನೊಂದಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ.
ಅಥ್ಲೆಟಿಕ್ಸ್, ಟೆನ್ನಿಸ್, ಕುಸ್ತಿ, ಟೇಬಲ್ಟೆನ್ನಿಸ್, ಬ್ಯಾಡ್ಮಿಂಟನ್, ಆರ್ಚರಿ (ಬಿಲ್ಲುಗಾರಿಕೆ), ಭಾರ ಎತ್ತುವಿಕೆ, ಟೆಕ್ವಾಂಡೋ, ಫೆನ್ಸಿಂಗ್, ಜೂಡೋ, ವುಷು, ಬಾಕ್ಸಿಂಗ್, ಕರಾಟೆ, ಯೋಗ, ವಾಲಿಬಾಲ್, ಬಾಸ್ಕೆಟ್ಬಾಲ್, ಹ್ಯಾಂಡ್ ಬಾಲ್, ನೆಟ್ ಬಾಲ್, ಥ್ರೋಬಾಲ್, ಕಬಡ್ಡಿ, ಫುಟ್ಬಾಲ್ ಕೀಡಾ ಕೂಟಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ, ಜಿಮ್ನಾಸ್ಟಿಕ್ – ಗೋಪಾಲನ್ ಸ್ಪೋಟ್ಸ್ ಸೇಂಟರ್, ವೈಟ್ ಫೀಲ್ಡ್, ಈಜು- ಕೆನ್ಸಿಂಗ್ ಟನ್ ಈಜುಕೊಳ, ಹಾಕಿ -ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣ, ಖೋ-ಖೋ, ಬಾಲ್ ಬ್ಯಾಡ್ಮಿಂಟನ್- ಸರ್ಕಾರಿ ಕಲಾ ಕಾಲೇಜು ಆಟದ ಮೈದಾನ ಡಾ: ಬಿ.ಆರ್.ಅಂಬೇಡ್ಕರ್ ಬೀದಿ, ಬೆಂಗಳೂರು ಹಾಗೂ ಶೂಟಿಂಗ್ -ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್, ಜ್ಞಾನಭಾರತಿ ಆವರಣದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 29 ರಂದು ಬೆಳಗ್ಗೆ 10.30 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸುವವರು ಬೆಂಗಳೂರು ನಗರ ಜಿಲ್ಲೆಯ ಕ್ರೀಡಾಪಟುಗಳು ಮಾತ್ರ ನೊಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಶ್ರೀ ಕಂಠೀರವ ಕ್ರೀಡಾಂಗಣ ಇವರನ್ನು ಖುದ್ದಾಗಿ ಅಥವಾ ದೂರವಾಣಿ 080-22239771 ರಲ್ಲಿ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ, ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

