HomeLatest Newsಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಸುಧಾರಣೆ; ಇನ್ಸ್‌ಪೆಕ್ಟರ್, ಡಿವೈಎಸ್‌ಪಿ ವರ್ಗಾವಣೆ ನಿಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಸುಧಾರಣೆ; ಇನ್ಸ್‌ಪೆಕ್ಟರ್, ಡಿವೈಎಸ್‌ಪಿ ವರ್ಗಾವಣೆ ನಿಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆ

ಬೆಂಗಳೂರು- ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಶಕಗಳಿಂದ ಬೇರೂರಿದ್ದ ಪ್ರಭಾವಿ ಹುದ್ದೆಗಳ ನಂಟು, ರಾಜಕೀಯ ಶಿಫಾರಸು ಹಾಗೂ ಲಾಬಿ ಸಂಸ್ಕೃತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅತ್ಯಂತ ಮಹತ್ವದ ಹಾಗೂ ದಿಟ್ಟ ಹೆಜ್ಜೆ ಇಟ್ಟಿದೆ. ಪೊಲೀಸ್ ಇನ್ಸ್‌ಪೆಕ್ಟರ್ (PI) ಮತ್ತು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DySP) ಹುದ್ದೆಗಳ ವರ್ಗಾವಣೆ ನಿಯಮಾವಳಿಗಳನ್ನು ಸಮಗ್ರವಾಗಿ ಪರಿಷ್ಕರಿಸಿರುವ ಗೃಹ ಇಲಾಖೆ, ಕಡ್ಡಾಯವಾಗಿ ಐದು ವರ್ಷಗಳ ‘ಕೂಲಿಂಗ್-ಆಫ್ ಅವಧಿ’ (Cooling-off period) ನಿಯಮವನ್ನು ಜಾರಿಗೆ ತಂದಿದೆ.

ಇಲಾಖೆಯಲ್ಲಿ ಪಾರದರ್ಶಕತೆ, ಆಡಳಿತಾತ್ಮಕ ಸುಧಾರಣೆ ಮತ್ತು ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಹೊಸ ಮಾರ್ಗಸೂಚಿಯನ್ನು ರೂಪಿಸಲಾಗಿದೆ.

ಎರಡು ವರ್ಷ ಕಾರ್ಯನಿರ್ವಾಹಕೇತರ ಸೇವೆ ಕಡ್ಡಾಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಯನಿರ್ವಾಹಕ ಹುದ್ದೆಗೆ ಹೊಸ ಷರತ್ತುಗಳು

ಬಡ್ತಿ ಪಡೆದ ಡಿವೈಎಸ್‌ಪಿಗಳು ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಪ್ರಮುಖ ಕಾರ್ಯನಿರ್ವಾಹಕ ಹುದ್ದೆಗೆ (Executive Posting) ಅರ್ಹರಾಗಲು, ಮೊದಲು ಕಾರ್ಯನಿರ್ವಾಹಕೇತರ (Non-Executive) ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ.

ನಾಲ್ಕು ವಾರಗಳ ಪುನರ್‌ತರಬೇತಿ

ಬಡ್ತಿ ಪಡೆದ ಅಧಿಕಾರಿಗಳು ಎರಡು ವರ್ಷಗಳ ಅವಧಿಯೊಳಗೆ ಕಡ್ಡಾಯವಾಗಿ ನಾಲ್ಕು ವಾರಗಳ ಕಾಲ ಪುನರ್‌ತರಬೇತಿಯನ್ನು (Refresher Training) ಪೂರ್ಣಗೊಳಿಸಬೇಕು. ಈ ತರಬೇತಿಯನ್ನು ಪೂರ್ಣಗೊಳಿಸದ ಅಧಿಕಾರಿಗಳಿಗೆ ಯಾವುದೇ ಕಾರ್ಯನಿರ್ವಾಹಕ ಹುದ್ದೆಗಳನ್ನು ನೀಡುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಐದು ವರ್ಷಗಳ ‘ಕೂಲಿಂಗ್ ಪಿರಿಯಡ್’

ನಗರ ಪ್ರದೇಶಗಳಲ್ಲಿ ಕೂಲಿಂಗ್ ಪಿರಿಯಡ್ ನಿಯಮ

(ಅಂತರ ಘಟಕ ವರ್ಗಾವಣೆ): ಬೆಂಗಳೂರು ನಗರ, ಮೈಸೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಬೆಳಗಾವಿ ನಗರ, ಕಲಬುರಗಿ ನಗರ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಸತತವಾಗಿ ಐದು ವರ್ಷ ಸೇವೆ ಪೂರೈಸಿದ ಅಧಿಕಾರಿಗಳಿಗೆ ಅದೇ ಆಯುಕ್ತರ ವ್ಯಾಪ್ತಿಯಲ್ಲಿ ಮರು ನೇಮಕ ಸಿಗುವುದಿಲ್ಲ. ಅಂತಹ ಅಧಿಕಾರಿಗಳು ಬೇರೆ ಘಟಕಗಳಲ್ಲಿ ಐದು ವರ್ಷಗಳ ‘ಕೂಲಿಂಗ್ ಪಿರಿಯಡ್’ ಪೂರ್ಣಗೊಳಿಸಿದ ಬಳಿಕವಷ್ಟೇ ಮರು ವರ್ಗಾವಣೆಗೆ ಅರ್ಹರಾಗುತ್ತಾರೆ. (ವಿಶೇಷ ಸಂದರ್ಭಗಳಲ್ಲಿ ಮಾತ್ರ ಸಮರ್ಥ ಪ್ರಾಧಿಕಾರದ ಅನುಮತಿಯೊಂದಿಗೆ ವಿನಾಯಿತಿ ನೀಡಬಹುದಾಗಿದೆ).

ಹೊಸ ವಿಭಾಗಗಳ ಸೇರ್ಪಡೆ:

ಪರಿಷ್ಕೃತ ಮಾರ್ಗಸೂಚಿಯಡಿ ರೈಲ್ವೆ ಪೊಲೀಸ್, ಸೈಬರ್ ಪೊಲೀಸ್ ಹಾಗೂ ಮಹಿಳಾ ಪೊಲೀಸ್ ಘಟಕಗಳನ್ನು ಅಧಿಕೃತವಾಗಿ ‘ಕಾರ್ಯನಿರ್ವಾಹಕ ವಿಭಾಗ’ದ ವ್ಯಾಪ್ತಿಗೆ ತರಲಾಗಿದೆ.

ಅನರ್ಹತೆಗೆ ಸ್ಪಷ್ಟ ಮಾನದಂಡ:

ಇಲಾಖಾ ವಿಚಾರಣೆಗಳು, ಲೋಕಾಯುಕ್ತ ಪ್ರಕರಣಗಳು ಅಥವಾ ಗಂಭೀರ ಕ್ರಿಮಿನಲ್ ತನಿಖೆಗಳನ್ನು ಎದುರಿಸುತ್ತಿರುವ ಹಾಗೂ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್‌ನಿಂದ ಅನರ್ಹರೆಂದು ಘೋಷಿಸಲ್ಪಟ್ಟಿರುವ ಯಾವುದೇ ಡಿವೈಎಸ್‌ಪಿ ಅಥವಾ ಇನ್‌ಪೆಕ್ಟರ್‌ಗೆ ಕಾರ್ಯನಿರ್ವಾಹಕ ಹುದ್ದೆಗಳನ್ನು ಕಲ್ಪಿಸುವುದಿಲ್ಲ.

ಸುಧಾರಣೆಯ ಹಿಂದಿನ ಹಿನ್ನೆಲೆ

ಹಿಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ನಗರ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಒಂದೇ ಕಡೆ ವರ್ಷಗಟ್ಟಲೆ ತಿಷ್ಠೆ ಬಿಡುವ ಮೂಲಕ ಆಡಳಿತದ ಮೇಲಿನ ಹಿಡಿತ ತಪ್ಪುತ್ತಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಬಡ್ತಿ ಪಡೆದ ತಕ್ಷಣವೇ ಪ್ರಭಾವ ಬೀರಿ ನಿರ್ದಿಷ್ಟ ಠಾಣೆ ಅಥವಾ ಉಪವಿಭಾಗಗಳಲ್ಲಿ ನೇಮಕಗೊಳ್ಳುವ ಪರಿಪಾಠವಿತ್ತು. ಇದು ಕಿರಿಯ ಅಧಿಕಾರಿಗಳ ನೈತಿಕ ಸ್ಥೈರ್ಯದ ಮೇಲೂ ಪರಿಣಾಮ ಬೀರುತ್ತಿತ್ತು.

ಈ ಹಿಂದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಆಡಳಿತಾತ್ಮಕ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕೈಗೊಂಡ ಮೇಜರ್ ಸರ್ಜರಿಯ ಮಾದರಿಯಲ್ಲೇ, ಈಗ ಪೊಲೀಸ್ ಇಲಾಖೆಯಲ್ಲೂ ಆಡಳಿತ ಶುದ್ಧೀಕರಣಕ್ಕೆ ಸರ್ಕಾರ ಮುಂದಾಗಿದೆ. ಈ ನೂತನ ಸುಧಾರಣೆಯು ಪೊಲೀಸ್ ಅಧಿಕಾರಿಗಳು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಲು ಹಾಗೂ ಇಲಾಖೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular