HomeKarnatakaಸರ್ಕಾರಿ ನೌಕರರ ಪ್ರಮುಖ ಬೇಡಿಕೆ 2026ರಲ್ಲಿ ಈಡೇರಿಕೆ?

ಸರ್ಕಾರಿ ನೌಕರರ ಪ್ರಮುಖ ಬೇಡಿಕೆ 2026ರಲ್ಲಿ ಈಡೇರಿಕೆ?

ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿ ಮಾಡುವ ಮೂಲಕ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸುವುದು. 2023ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಈ ಕುರಿತು ಸರ್ಕಾರಿ ನೌಕರರಿಗೆ ಭರವಸೆ ನೀಡಿತ್ತು.

ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಸಹ ಈ ಬೇಡಿಕೆ ಇನ್ನೂ ಸಹ ಈಡೇರಿಲ್ಲ. 2025ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೂ ಈ ಕುರಿತು ಚರ್ಚೆಗಳು ನಡೆದಿತ್ತು.

ತರೀಕೆರೆ ಶಾಸಕ ಶ್ರೀನಿವಾಸ ಜಿ.ಹೆಚ್. ಕೇಳಿದ್ದ ಪ್ರಶ್ನೆಗೆ  ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಶಾಸಕರು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಸರ್ಕಾರಿ ನೌಕರರ ಒಟ್ಟು ಎಷ್ಟು. ಅದರಲ್ಲಿ ಹಳೆ ಪಿಂಚಣಿ, ಹೊಸ ಪಿಂಚಣಿ ಯೋಜನೆಗೆ ಒಳಪಡುವ ನೌಕರರ ಸಂಖ್ಯೆ ಎಷ್ಟು? ಎಂದು ಪ್ರಶ್ನಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದರಾಮಯ್ಯ ತಮ್ಮ ಉತ್ತರದಲ್ಲಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಒಟ್ಟು ಸಂಖ್ಯೆ 5,01,034 (ದಿನಾಂಕ:04.08.2025ರಲ್ಲಿ HRMSನಲ್ಲಿ ಇದ್ದಂತೆ) ಎಂದು ಹೇಳಿದ್ದರು. ಹಳೆ ಪಿಂಚಣಿ ಯೋಜನಗೊಳಪಡುವ ನೌಕರರ ಸಂಖ್ಯೆ 2,14,434. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ನೌಕರರ ಸಂಖ್ಯೆ 2,86,600 ಎಂದು ಮಾಹಿತಿ ನೀಡಿದ್ದರು.

ಶಾಸಕರು 1/4/2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಹಾಗೂ ಅನುದಾನಿತ ಮತ್ತು ನಿಗಮ ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸುವ ಕುರಿತಂತೆ ಸರ್ಕಾರವು ರಚನೆ ಮಾಡಿರುವ ಸಮಿತಿಯು ಈವರೆಗೆ ಎಷ್ಟು ಸಭೆಗಳನ್ನು ನಡೆಸಿದೆ. ಸದರಿ ಸಮಿತಿಯು ಯಾವ ಯಾವ ರಾಜ್ಯಗಳಿಗೆ ಭೇಟಿ ನೀಡಿದೆ. ಸದರಿ ಸಮಿತಿಯು ಸಭೆಗಳನ್ನು ನಡೆಸಿ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ನೀಡಿದೆಯೇ? ಎಂದು ಪ್ರಶ್ನಿಸಿದ್ದರು.

ಮುಖ್ಯಮಂತ್ರಿಗಳು ಉತ್ತರದಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೂಕ್ತ ಬದಲಾವಣೆ/ ಮಾರ್ಪಾಡು ಮಾಡಲು ಸಮಗ್ರವಾಗಿ ಪರಿಶೀಲಿಸಲು ಈಗಾಗಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 11.12.2018ರ ಮತ್ತು ದಿನಾಂಕ 01.03.2023ರ ಸರ್ಕಾರಿ ಆದೇಶಗಳನ್ವಯ ರಚಿಸಲಾಗಿರುವ ಸಮಿತಿಯನ್ನು ದಿನಾಂಕ. 16.08.2024ರಲ್ಲಿ ಪುನರ್ ರಚಿಸಿ ಆದೇಶಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಸದರಿ ಸಮಿತಿಯು ಈಗಾಗಲೇ ಎರಡು ಸಭೆಗಳನ್ನು ನಡೆಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಬದಲಾವಣೆ/ ಮಾರ್ಪಾಡು ಮಾಡಿರುವ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ಅಧಿಕಾರಿಗಳನ್ನು ಒಳಗೊಂಡ ತಂಡಗಳು ಅಧ್ಯಯನ ನಡೆಸಿ ವರದಿಗಳನ್ನು ಸಮಿತಿಗೆ ಸಲ್ಲಿಸಲಾಗಿದೆ. ಸಮಿತಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದರು.

ಸದತಿ ಸಮಿತಿಗೆ ವರದಿಯನ್ನು ನೀಡಲು ಸರ್ಕಾರವು ಕಾಲಮಿತಿಯನ್ನು ನಿಗದಿಗೊಳಿಸಿಲ್ಲ ಮತ್ತು ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸಿಲ್ಲ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ರಾಜ್ಯ ಸರ್ಕಾರದ ಅಧ್ಯಯನ ಸಮಿತಿ ಅಧ್ಯಕ್ಷೆ ಮತ್ತು ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಹಳೆ ಪಿಂಚಣಿ ಯೋಜನೆ ಮರು ಜಾರಿ ಕುರಿತು ಸರ್ಕಾರಕ್ಕೆ ಒಂದು ತಿಂಗಳಿನಲ್ಲಿ ವರದಿ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್ ಮಂಡನೆ ತಯಾರಿಯಲ್ಲಿದ್ದು, ಅದಕ್ಕೂ ಮೊದಲು ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular