ಕರ್ನಾಟಕ ಸರ್ಕಾರ ಕೇರಳದ ಬಗ್ಗೆ ವಿಶೇಷ ಪ್ರೀತಿ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದೆ. ಹೌದು ರಾಜ್ಯ ಸರ್ಕಾರ ವಯನಾಡು ಕ್ಷೇತ್ರಕ್ಕೆ 10 ಕೋಟಿ ರೂ. ಹೊಸ ಅನುದಾನ ನೀಡಿದ್ದು, ಈಗ ಚರ್ಚೆಗೆ ಕಾರಣವಾಗಿದೆ.
ವಯನಾಡು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕ್ಷೇತ್ರ. ರಾಜ್ಯದ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನರ ತೆರಿಗೆ ಹಣವನ್ನು ಕೇರಳ ರಾಜ್ಯದ ವಯನಾಡಿಗೆ ನೀಡಿದೆ ಎಂಬುದು ಬಿಜೆಪಿ ಆರೋಪವಾಗಿದೆ. ಕೇರಳ ವಿಧಾನಸಭೆ ಚುನಾವಣೆ ಸಮಯದಲ್ಲಿ ಇದು ಭಾರೀ ಚರ್ಚೆ ಹುಟ್ಟು ಹಾಕಿದೆ.
ಆರ್.ಅಶೋಕ ಪೋಸ್ಟ್: ಈ ಕುರಿತು ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕೇರಳಂ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಹೆಚ್ಚುವರಿ ವಿಶೇಷ ಅನುದಾನ ನೀಡಿರುವ ಕೇರಳಂ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು’ ಎಂದು ಲೇವಡಿ ಮಾಡಿದ್ದಾರೆ.
‘ಕೇರಳಂ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಂತಹ ಹೃದಯ ವೈಶಾಲ್ಯ ಇರುವ, ಸಂವೇದನಾಶೀಲ ಮುಖ್ಯಮಂತ್ರಿ ಕರ್ನಾಟಕದಲ್ಲೂ ಇದ್ದಿದ್ದರೆ, ಎಲ್ಲ ಕ್ಷೇತ್ರಗಳಿಗೂ ಭರಪೂರ ಅನುದಾನ ಸಿಕ್ಕುತ್ತಿತ್ತು. ಆದರೆ ನತದೃಷ್ಟ ಕನ್ನಡಿಗರು ಕೇರಳಂನವರಷ್ಟು ಅದೃಷ್ಟವಂತರಲ್ಲ ಬಿಡಿ!’ ಎಂದು ವ್ಯಂಗ್ಯವಾಡಿದ್ದಾರೆ.
‘2025-26ನೇ ಹಣಕಾಸು ವರ್ಷದಲ್ಲಿ ಬಜೆಟ್ ಹೊರತಾಗಿ ವೆಚ್ಚ ಮಾಡಿರುವ ಮತ್ತು ಮಾಡಲಾಗುವ 14,767 ಕೋಟಿ ರೂ. ಮೊತ್ತದ 3ನೇ ಮತ್ತು ಅಂತಿಮ ಕಂತಿನ ಪೂರಕ ಅಂದಾಜಿನಲ್ಲಿ ವಯನಾಡಿನ ಮುಪ್ಪಾಡಿಯಲ್ಲಿ ಉಂಟಾದ ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ 10 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಿದೆ’ ಎಂದು ಅಶೋಕ ಹೇಳಿದ್ದಾರೆ.
‘ಒಂದು ಕಡೆ ನಮ್ಮದೇ ರಾಜ್ಯದಲ್ಲಿ ಕಸ ವಿಲೇವಾರಿ ಮಾಡುವ ಸಂಸ್ಥೆಗಳಿಗೆ, ಸರ್ಕಾರಿ ನೌಕರರ ಸಂಬಳಕ್ಕೆ, ಗುತ್ತಿದೆಗಾರರ ಬಾಕಿ ಪಾವತಿ ಮಾಡಲು ಹಣವಿಲ್ಲ. ಸರ್ಕಾರಿ ಶಾಲೆಗಳ ದುರಸ್ತಿಗೆ, ಸರಿಯಾದ ಸಮಯಕ್ಕೆ ಮಕ್ಕಳ ಪಠ್ಯಪುಸ್ತಕ, ಯುನಿಫಾರ್ಮ್, ಶೂ, ಸಾಕ್ಸ್ ನೀಡಲು ದುಡ್ಡಿಲ್ಲ. ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ, ಸ್ಕ್ಯಾನಿಂಗ್ ಸೇವೆ ಒದಗಿಸುವ ಕಂಪನಿಗಳ ಬಿಲ್ ಪಾವತಿಗೆ ಹಣವಿಲ್ಲ. ಶಾಸಕರಿಗೆ ಅನುದಾನವಿಲ್ಲ. ರಾಜ್ಯದ ಹಣಕಾಸು ಪರಿಸ್ಥಿತಿಯೇ ಇಷ್ಟು ಚಿಂತಾಜನಕವಾಗಿರುವಾಗ ಹೈಕಮಾಂಡ್ ನಾಯಕರನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ, ನೆರೆ ರಾಜ್ಯಕ್ಕೆ 10 ಕೋಟಿ ಹೆಚ್ಚುವರಿ ನೆರವು ನೀಡಿರುವ ಸಿಎಂ ಸಿದ್ದರಾಮಯ್ಯನವರ ನಿರ್ಲಜ್ಜತೆ, ಭಂಡತನಕ್ಕೆ ಅವರೇ ಸಾಟಿ’ ಎಂದು ತಿಳಿಸಿದ್ದಾರೆ.

