ಸಾಮಾನ್ಯವಾಗಿ 26 ವರ್ಷದ ಯುವಕನ ಕೈಗೆ ಮಿಲಿಯನ್ ಡಾಲರ್ (ಕೋಟಿಗಟ್ಟಲೆ ಹಣ) ಬಂದರೆ ಏನು ಮಾಡುತ್ತಾನೆ? ಐಷಾರಾಮಿ ಕಾರು, ಬೆಲೆಬಾಳುವ ವಾಚ್ಗಳು ಅಥವಾ ದುಬಾರಿ ಬ್ರಾಂಡೆಡ್ ವಸ್ತುಗಳನ್ನು ಖರೀದಿಸಿ ಆಡಂಬರದ ಜೀವನ ನಡೆಸುತ್ತಾನೆ. ಆದರೆ ಅಮನ್ ಗೋಯಲ್ ಎಂಬ ಯುವ ಉದ್ಯಮಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಹಾದಿ ತುಳಿದಿದ್ದಾರೆ. ಅವರು ತಮ್ಮ ಸಂಪತ್ತನ್ನು ಹೇಗೆ ಬಳಸಿದರು ಎಂಬ ವಿವರವಾದ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಅಮನ್ ಗೋಯಲ್ ಹಂಚಿಕೊಂಡ ಯಶೋಗಾಥೆ
“ನವೆಂಬರ್ 2021ರಲ್ಲಿ, ನನ್ನ ಸ್ಟಾರ್ಟ್ಅಪ್ ಅನ್ನು ಒಂದು ದೊಡ್ಡ ಕಂಪನಿಗೆ ಮಿಲಿಯನ್ ಡಾಲರ್ಗಳಿಗೆ ಮಾರಾಟ ಮಾಡಿದೆ. ಆಗ ನನಗೆ ಕೇವಲ 26 ವರ್ಷ. ಆ ವಯಸ್ಸಿನಲ್ಲಿ ಅನೇಕರು ಇತರರನ್ನು ಮೆಚ್ಚಿಸಲು ಐಷಾರಾಮಿ ಕಾರು ಅಥವಾ ಜೀವನಶೈಲಿಗಾಗಿ ಹಣ ವ್ಯಯಿಸುತ್ತಾರೆ. ಆದರೆ ನಾನು ಸುಖ, ನೆಮ್ಮದಿ ಮತ್ತು ದೀರ್ಘಕಾಲದ ಆರ್ಥಿಕ ಸ್ವಾತಂತ್ರ್ಯವನ್ನು ಸಮತೋಲನಗೊಳಿಸುವ ಹಾದಿ ಆಯ್ದುಕೊಂಡೆ,” ಎಂದು ಅವರು ಹೇಳಿದ್ದಾರೆ.
ಅಮನ್ ಹಣ ವ್ಯಯಿಸಿದ ಪ್ರಮುಖ ವಿಷಯಗಳು:
- ಕುಟುಂಬಕ್ಕೆ ಮೊದಲ ಆದ್ಯತೆ: ಸ್ಟಾರ್ಟ್ಅಪ್ ಮಾರಾಟವಾದ ಅದೇ ವರ್ಷ ಅಮನ್ ತಮ್ಮ ಪೋಷಕರನ್ನು ಮುಂಬೈಗೆ ಕರೆಸಿಕೊಂಡರು. “ನಮ್ಮ ಸಂಪತ್ತನ್ನು ನಮಗೆ ಅತ್ಯಂತ ಪ್ರಿಯವಾದವರೊಂದಿಗೆ ಹಂಚಿಕೊಳ್ಳದಿದ್ದರೆ ಅದಕ್ಕೆ ಅರ್ಥವೇ ಇಲ್ಲ. ಪೋಷಕರು ಈಗಲೂ ನನ್ನೊಂದಿಗೇ ವಾಸಿಸುತ್ತಿದ್ದಾರೆ, ಇದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ,” ಎನ್ನುತ್ತಾರೆ ಅವರು.
- ಆರೋಗ್ಯವೇ ಭಾಗ್ಯ: ಹಣ ಬಂದ ತಕ್ಷಣ ಸುಮ್ಮನೆ ಕುಳಿತುಕೊಳ್ಳದೆ ಆರೋಗ್ಯದ ಕಡೆ ಗಮನಹರಿಸಿದರು. ಒಬ್ಬ ಫಿಟ್ನೆಸ್ ಕೋಚ್ ನೇಮಿಸಿಕೊಂಡು ಸುಮಾರು 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ದಂಪತಿಗಳಿಬ್ಬರೂ ವರ್ಷಕ್ಕೆ ಎರಡು ಬಾರಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ.
- ಆಹಾರ ಕ್ರಮ: ಹೊರಗಿನ ಜಂಕ್ ಫುಡ್, ಸಕ್ಕರೆ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. “ಆರೋಗ್ಯವು ಅಡುಗೆಮನೆಯಲ್ಲಿ ಶುರುವಾಗುತ್ತದೆ, ಜಿಮ್ನಲ್ಲಿ ಅಲ್ಲ” ಎಂಬುದು ಇವರ ಮಂತ್ರ.
- ಸ್ವಂತ ಮನೆ : ಯಾವುದೇ ಸಾಲ (Loan) ಇಲ್ಲದೆ 2022ರಲ್ಲಿ ಪೂರ್ತಿ ಹಣ ಪಾವತಿಸಿ ಸ್ವಂತ ಮನೆ ಖರೀದಿಸಿದರು. ಬಾಡಿಗೆ ಮನೆಯಲ್ಲಿರುವುದು ಲಾಭದಾಯಕ ಎಂದು ಹಲವರು ಹೇಳಿದರೂ, ಪೋಷಕರ ನೆಮ್ಮದಿಗಾಗಿ ಅವರು ಸ್ವಂತ ಮನೆಯನ್ನೇ ಆಯ್ಕೆ ಮಾಡಿಕೊಂಡರು.
ಕೊನೆಯ ಮಾತು: “ಅಪ್ಗ್ರೇಡ್ ಎಂದರೆ ಕೇವಲ ದುಬಾರಿ ವಸ್ತುಗಳಲ್ಲ; ಶಾಂತಿ, ಆರೋಗ್ಯ ಮತ್ತು ಪ್ರೀತಿಪಾತ್ರರೊಂದಿಗೆ ಕಳೆಯುವ ಸಮಯವೇ ನಿಜವಾದ ಐಷಾರಾಮಿ ಜೀವನ,” ಎಂದು ಅಮನ್ ತಮ್ಮ ಟ್ವೀಟ್ ಮುಕ್ತಾಯಗೊಳಿಸಿದ್ದಾರೆ. ಅಮನ್ ಅವರ ಈ ಪ್ರಬುದ್ಧ ನಿರ್ಧಾರಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

