ಕರ್ನಾಟಕ ಸರ್ಕಾರದಿಂದಲೇ ಬೆಂಗಳೂರು ನಗರದಲ್ಲಿ ಮಲ್ಟಿಫೆಕ್ಸ್ ನಿರ್ಮಾಣವಾಗಲಿದೆ. ಹೌದು, ಸಿನಿಮಾ ಪ್ರದರ್ಶನ, ಕಾರ್ಯಕ್ರಮ ಆಯೋಜನೆ, ಸಿನಿಮಾ ತರಬೇತಿ ನೀಡುವ ಮಾದರಿಯ ಭವ್ಯ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ.
ಬೆಂಗಳೂರು ನಗರದ ನಂದಿನಿ ಲೇಔಟ್‌ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸೇರಿದ 2.5 ಎಕರೆ ಜಾಗದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ. ಪಿಪಿಪಿ ಮಾದರಿಯಲ್ಲಿ ಸುಮಾರು 100 ಕೋಟಿ ರೂ. ಮೊತ್ತದ ಯೋಜನೆಯನ್ನು ಕೈಗೊಳ್ಳಲಾಗುತ್ತದೆ.
ಯೋಜನೆ ವಿವರ: ಈ ಕುರಿತು ಮನಿ ಕಂಟ್ರೋಲ್ ವರದಿ ಮಾಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮನಿ ಕಂಟ್ರೋಲ್ ಜೊತೆ ಮಾತನಾಡಿದ್ದು, ಉದ್ದೇಶಿತ ಕೇಂದ್ರವು ಚಲನಚಿತ್ರ ಪ್ರದರ್ಶನ, ಪ್ರದರ್ಶನ ಕಲೆಗಳು, ಪ್ರೊಡಕ್ಷನ್ ಸ್ಟುಡಿಯೋಗಳು ಮತ್ತು ತರಬೇತಿ ಚಟುವಟಿಕೆಗಳಿಗೆ ಪೂರಕವಾದ ಸೌಲಭ್ಯಗಳನ್ನು ಒಳಗೊಂಡಿರಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮಾದರಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತದೆ. ಆದಾಯವನ್ನು ಗಳಿಸುವ ಉದ್ದೇಶದಿಂದ ಈ ಯೋಜನೆಯ ಭಾಗವಾಗಿ ವಾಣಿಜ್ಯ ಮಳಿಗೆಗಳು, ಆಹಾರ ಮಳಿಗೆಗಳು ಮತ್ತು ಸಮಾವೇಶಗಳನ್ನು ನಡೆಸಲು ಜಾಗ ನಿಗದಿ ಮಾಡಲಾಗುತ್ತದೆ.
ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ರೂಪಿಸಲು ಮತ್ತು ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಸಲಹೆಗಾರರನ್ನು ನೇಮಿಸಲು ಕೆಲವು ದಿನಗಳ ಹಿಂದೆ ಟೆಂಡರ್ ಕರೆಯಲಾಗಿದೆ.
ಭಾರತ ಮತ್ತು ವಿದೇಶಗಳಲ್ಲಿನ ಇಂತಹ ಸೌಲಭ್ಯಗಳನ್ನು ಹೋಲಿಕೆ ಮಾಡಿ, ನಿರೀಕ್ಷಿತ ಜನಸಂದಣಿ ವಿಶ್ಲೇಷಿಸಿ, ಸಂಭಾವ್ಯ ಆದಾಯದ ಮೂಲಗಳನ್ನು ಗುರುತಿಸಿ, ಸುತ್ತಮುತ್ತಲಿನ ಪ್ರದೇಶದ ಭೂ ಬಳಕೆ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಅಧ್ಯಯನ ಮಾಡುವ ಜವಾಬ್ದಾರಿಯನ್ನು ಟೆಂಡರ್‌ನಲ್ಲಿ ನೀಡಲಾಗುತ್ತದೆ.
ಈ ವರದಿಯ ಆಧಾರದ ಮೇಲೆ ವಿನ್ಯಾಸ, ಸಂಪರ್ಕ ರಸ್ತೆಗಳು, ಪಾರ್ಕಿಂಗ್ ಸೌಲಭ್ಯಗಳು ಸೇರಿ ಯೋಜನೆಯ ಸಂಪೂರ್ಣ ಪರಿಕಲ್ಪನೆ ಸಿದ್ಧವಾಗಲಿದೆ. ಯೋಜನೆಯ ಪ್ರಾಥಮಿಕ ವೆಚ್ಚದ ಅಂದಾಜನ್ನೂ ಸಹ ಈ ವರದಿ ಒಳಗೊಂಡಿರುತ್ತದೆ.
೨೦೨೫-೨೬ರ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂದಿನಿ ಲೇಔಟ್‌ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸೇರಿದ ಜಮೀನಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಸಂಕೀರ್ಣವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು.
ಪ್ರದರ್ಶನ ಕಲೆಗಳು, ಚಲನಚಿತ್ರ ಸಂಬಂಧಿತ ಚಟುವಟಿಕೆಗಳು ಮತ್ತು ವಾಣಿಜ್ಯ ಘಟಕಗಳನ್ನು ಒಳಗೊಂಡ ಸಾಂಸ್ಕೃತಿಕ ಮತ್ತು ಸಿನಿಮಾ ಕೇಂದ್ರಿತ ಹಬ್ ಆಗಿ ಈ ಸ್ಥಳವನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

