HomeKarnataka14 ಶಾಸಕರ ಪಟ್ಟಿಯೊಂದಿಗೆ ದೆಹಲಿಗೆ ಸಿಎಂ: ಸಂಕ್ರಾಂತಿ ಸಂಪುಟ ವಿಸ್ತರಣೆ ಸಿಕ್ರೇಟ್!

14 ಶಾಸಕರ ಪಟ್ಟಿಯೊಂದಿಗೆ ದೆಹಲಿಗೆ ಸಿಎಂ: ಸಂಕ್ರಾಂತಿ ಸಂಪುಟ ವಿಸ್ತರಣೆ ಸಿಕ್ರೇಟ್!

ಸಂಕ್ರಾಂತಿ ಕರ್ನಾಟಕ ರಾಜಕೀಯದಲ್ಲಿ ಬದಲಾವಣೆ ತರಲಿದೆ?. ಹೌದು ಮುಖ್ಯಮಂತ್ರಿಯಾಗಿ ಸುಧೀರ್ಘ ಅವಧಿಯನ್ನು ಜನವರಿ 6ರಂದು ಪೂರೈಸಿರುವ ಸಿದ್ದರಾಮಯ್ಯ ಸಂಪುಟ ವಿಸ್ತರಣೆ/ ಪುನಾರಚನೆಯತ್ತ ಚಿತ್ತ ಹರಿಸಿದ್ದಾರೆ. ಈಗಾಗಲೇ ಹೈಕಮಾಂಡ್ ನಾಯಕರಿಂದ ಇದಕ್ಕೆ ಪ್ರಾಥಮಿಕ ಒಪ್ಪಿಗೆ ಪಡೆದುಕೊಂಡಿದ್ದಾರೆ.

ಸೋಮವಾರದಿಂದ ಸಿದ್ದರಾಮಯ್ಯ ಮೈಸೂರಿನಲ್ಲಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದರು.

ಈಗ ಸಂಕ್ರಾಂತಿ ಬಳಿಕ ಸಿದ್ದರಾಮಯ್ಯ ಸಂಪುಟ ವಿಸ್ತರಣೆ/ ಪುನಾರಚನೆ ಆಗುವುದು ಬಹುತೇಕ ಖಚಿತವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸಂಪುಟಕ್ಕೆ ಸೇರಿಸಿಕೊಳ್ಳುವ 14 ಶಾಸಕರ ಪಟ್ಟಿಯನ್ನು ಈಗಾಗಲೇ ಅವರು ತಯಾರಿ ಮಾಡಿದ್ದು, ಅದನ್ನು ಹಿಡಿದು ದೆಹಲಿ ವಿಮಾನ ಏರಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನವರಿ 14ರ ಬಳಿಕ ಭೇಟಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜನವರಿ 9ರ ಬಳಿಕ ದೆಹಲಿಗೆ ವಾಪಸ್ ಆಗಲಿದ್ದಾರೆ. ಸಿದ್ದರಾಮಯ್ಯ ಜನವರಿ 14ರ ಬಳಿಕ ದೆಹಲಿಗೆ ಭೇಟಿ ನೀಡಲಿದ್ದು, ಸಂಪುಟ ವಿಸ್ತರಣೆ/ ಪುನಾರಚನೆಗೆ ಒಪ್ಪಿಗೆ ಪಡೆಯಲಿದ್ದಾರೆ.

ನವೆಂಬರ್ 20ರಂದು ಸರ್ಕಾರ ಎರಡೂವರೆ ವರ್ಷ ಪೂರೈಸಿದಾಗಲೇ ಸಿದ್ದರಾಮಯ್ಯ ಸಂಪುಟ ಪುನಾರಚನೆ ಬೇಡಿಕೆ ಮುಂದಿಟ್ಟಿದ್ದರು. ಆದರೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ಉಂಟಾದ  ಗೊಂದಲ, ಬೆಳಗಾವಿಯ ಚಳಿಗಾಲದ ಅಧಿವೇಶನದ ಕಾರಣ ಅದು ಮುಂದಕ್ಕೆ ಹೋಗಿತ್ತು.

ನಾಯಕತ್ವ ಬದಲಾವಣೆ ವಿಚಾರ ಸದ್ಯಕ್ಕೆ ಮುಗಿದ ಅಧ್ಯಾಯವಾಗಿದೆ. ಆದ್ದರಿಂದ ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಿ, ಹೊಸ ಶಾಸಕರಿಗೆ ಅವಕಾಶ ನೀಡಿ 2028ರ ಚುನಾವಣೆಯತ್ತ ಗಮನ ಹರಿಸಲಿದ್ದಾರೆ. ಇದಕ್ಕಾಗಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚಿಸಿದ್ದಾರೆ.

ಜನವರಿ 14ರ ಬಳಿಕ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಗೆ ಬುಲಾವ್ ನೀಡುವ ನಿರೀಕ್ಷೆ ಇದ್ದು, ಆಗ ಸಿದ್ದರಾಮಯ್ಯ ತಯಾರು ಮಾಡಿದ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ನೀಡಿ, ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ.

ಬಿ.ನಾಗೇಂದ್ರ, ಕೆ.ಎನ್.ರಾಜಣ್ಣ ರಾಜೀನಾಮೆ ಬಳಿಕ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಈ ಸ್ಥಾನಗಳನ್ನು ಭರ್ತಿ ಮಾಡುವ ಜೊತೆಗೆ ಹೊಸ ಶಾಸಕರಿಗೂ ಸಚಿವರಾಗುವ ಅವಕಾಶ ನೀಡುವುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ.

ಹಿರಿಯ ಸಚಿವರಿಗೆ, ಸರಿಯಾಗಿ ಕೆಲಸ ಮಾಡದವರಿಗೆ, ಕೇವಲ ಹೇಳಿಕೆಗಳನ್ನು ನೀಡಿಕೊಂಡು ತಿರುಗಾಡುವವರಿಗೆ ಕೊಕ್ ಕೊಟ್ಟು ಉತ್ಸಾಹದಿಂದ ಕೆಲಸ ಮಾಡುವ ಶಾಸಕರನ್ನು ಸಚಿವರನ್ನಾಗಿ ಮಾಡುವ ತಂತ್ರವನ್ನು ಸಿದ್ದರಾಮಯ್ಯ ರೂಪಿಸಿದ್ದಾರೆ.

ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಹೊಸ ಸಂಪುಟವನ್ನು ರಚನೆ ಮಾಡುವುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ. ಆದರೆ ಇದಕ್ಕೆ ಹೈಕಮಾಂಡ್ ಒಪ್ಪಿಗೆ ಬೇಕಿದೆ. ಡಿ.ಕೆ.ಶಿವಕುಮಾರ್ ಮತ್ತು ಅವರ ಬಣದ ಶಾಸಕರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡಬೇಕಿದೆ.

ಈಗಾಗಲೇ ಕಾಂಗ್ರೆಸ್‌ನ ಹಲವು ಶಾಸಕರು ಸಚಿವರಾಗುವ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಳಿಯೂ ಚರ್ಚಿಸಿದ್ದಾರೆ. ಚುನಾವಣೆಗೆ ಎರಡೂವರೆ ವರ್ಷ ಇರುವ ಕಾರಣ ಶಾಸಕರು ಸಚಿವ ಸ್ಥಾನ ಸಿಕ್ಕರೆ ಇನ್ನೂ ಉತ್ಸಾಹದಿಂದ ಕೆಲಸ ಮಾಡಲಿದ್ದಾರೆ.

ದೆಹಲಿ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ್ದ ಡಿ.ಕೆ.ಶಿವಕುಮಾರ್, ಸಂಪುಟ ವಿಸ್ತರಣೆ/ ಪುನಾರಚನೆ ಕುರಿತು ಸಿದ್ದರಾಮಯ್ಯ ಅವರನ್ನು ಕೇಳಿ. ಈ ಬಗ್ಗೆ ಉತ್ತರ ನೀಡಲು ಅವರೇ ಸರಿಯಾದ ವ್ಯಕ್ತಿ ಎಂದು ಹೇಳಿದ್ದರು. ಸಿದ್ದರಾಮಯ್ಯ ಈ ಹಿಂದೆ ರಾಹುಲ್ ಗಾಂಧಿ ಭೇಟಿಯಾದಾಗಲೂ ಸಂಪುಟ ಪುನಾರಚನೆ ಕುರಿತು ಚರ್ಚಿಸಿದ್ದರು.

ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಸಿದ್ದರಾಮಯ್ಯ, “ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ, ಕುಶಲೋಪರಿ ವಿಚಾರಿಸಿದೆ. ಈ ಸಮಯದಲ್ಲಿ ರಾಜಕೀಯ ಮಾತನಾಡಿಲ್ಲ” ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular