ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಮತ್ತೆ ಮೇಜರ್ ಸರ್ಜರಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕೆಲ ನಾಯಕರನ್ನು ಬದಲಾಯಿಸಿ ಬೇರೆಯವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.
ವಿಧಾನಮಂಡಲ ಅಧಿವೇಶನ ಮುಗಿದ ಬೆನ್ನಲ್ಲೇ ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಮತ್ತೆ ಭಾರಿ ಬದಲಾವಣೆಯಾಗುವ ಸಾಧ್ಯತೆ ಕುರಿತ ಚರ್ಚೆಯಾಗುತ್ತಿದೆ. ಈ ಬಾರಿ 3ರಿಂದ 5 ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ಈಗಾಗಲೇ ರಾಜ್ಯದ ನಾಯಕರೊಂದಿಗೆ ಹೈಕಮಾಂಡ್ ನಾಯಕರು ಮಾತುಕತೆ ನಡೆಸಿದ್ದು, ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಮತ್ತೆ ಬುಲಾವ್ ನೀಡುವ ಸಾಧ್ಯತೆ ಇದ್ದು, ಗುರುವಾರ ಸಿಎಂ ದೆಹಲಿಗೆ ತೆರಳುವ ನಿರೀಕ್ಷೆಯಿದೆ. ಅಂದು ಹೈಕಮಾಂಡ್ ನಾಯಕರೊಂದಿಗೆ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಸಚಿವ ಸ್ಥಾನಕ್ಕಾಗಿ ಕೆಲವು ಹಿರಿಯ ನಾಯಕರು ಈಗಾಗಲೇ ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಚರ್ಚೆಯಿಂದ ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಸಂಪುಟ ಪುನಾರಚನೆಯ ಮೂಲಕ ಅಸಮಾಧಾನಗೊಂಡಿರುವ ಹಾಗೂ ರೆಬೆಲ್ ನಾಯಕರಿಗೆ ಅವಕಾಶ ನೀಡುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಸಚಿವ ಸಮ್ಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಖಾಲಿ ಇರುವ ಒಂದು ಸಚಿವ ಸ್ಥಾನಕ್ಕಾಗಿ ಮಹಿಳಾ ಶಾಸಕಿಯರ ಪಒಪೋಟಿ ಕುದ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ನಾಯಕರೊಂದಿಗೆ ಮತ್ತೊಮ್ಮೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಸಂಪುಟದಲ್ಲಿ ಹಿರಿತನಕ್ಕೆ ಆದ್ಯತೆ ನೀಡದಿರುವುದು ಹಾಗೂ ಜಾತಿ ಸಮೀಕರಣದ ವಿಚಾರದಲ್ಲೂ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜನತಾ ಪರಿವಾರದ ಹಿನ್ನೆಲೆಯ 17 ಮಂದಿಗೆ ಸಚಿವ ಸ್ಥಾನ ನೀಡಿರುವುದೇಕೆ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ. ಹೀಗಾಗಿ, ಸಿಎಂ ಡಿಕೆ ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕರ ನಡುವಿನ ಮಾತುಕತೆ ಬಳಿಕ ಸಂಪುಟ ಸರ್ಜರಿ ಬಗ್ಗೆ ಸ್ಪಷ್ಟನೆ ಸಿಗಲಿದೆ.

