ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಭಾರತೀಯ ಸಿನಿಮಾರಂಗವೇ ಕುತೂಹಲದಿಂದ ಕಾಯುತ್ತಿರುವ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಚೆನ್ನೈನಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಟಿ ಹುಮಾ ಖುರೇಷಿ ತಮ್ಮ ಸಹನಟಿ ಕಿಯಾರಾ ಅಡ್ವಾಣಿ ಅವರ ವೃತ್ತಿಪರತೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡ ಹುಮಾ, ಕಿಯಾರಾ ಅವರ ಶ್ರದ್ಧೆ ತಮಗೆ ದೊಡ್ಡ ಸ್ಫೂರ್ತಿ ನೀಡಿತು ಎಂದು ಹೇಳಿದರು. ಪ್ರೀ ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಯಾವುದೇ ಕಥೆಯ ಸಸ್ಪೆನ್ಸ್ ಅಥವಾ ಸ್ಪಾಯ್ಲರ್ ಇಲ್ಲ ಎಂದು ಸ್ಪಷ್ಟಪಡಿಸಿದರು.
ಚಿತ್ರೀಕರಣದ ವೇಳೆ ಕೃತಕ ಮಳೆಯ ಸನ್ನಿವೇಶವೊಂದನ್ನು ಶೂಟ್ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ನನಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ಕೆಲಸ ಮಾಡುವುದು ಕಷ್ಟವಾಗಿ ಚಿತ್ರೀಕರಣದ ಬಗ್ಗೆ ದೂರು ಹೇಳಬೇಕು ಎನಿಸುತ್ತಿತ್ತು. ಆದರೆ ಅದೇ ಸಮಯದಲ್ಲಿ ನನ್ನ ಎದುರಿಗೆ ಇದ್ದ ಕಿಯಾರಾ ಅಡ್ವಾಣಿ ಅವರನ್ನು ನೋಡಿದೆ. ಅವರು ಆ ಸಮಯದಲ್ಲಿ ಸುಮಾರು ಆರು ತಿಂಗಳ ಗರ್ಭಿಣಿಯಾಗಿದ್ದರು. ಅಂತಹ ಸ್ಥಿತಿಯಲ್ಲೂ ಸುರಿಯುವ ಮಳೆಯಲ್ಲಿ ಕಲ್ಲು ಬಂಡೆಯಂತೆ ನಿಂತು ನಟಿಸುತ್ತಿದ್ದರು. ಅವರನ್ನು ನೋಡಿ ನನಗೆ ದೂರು ಹೇಳುವ ಆಲೋಚನೆಯೇ ಹೊರಟುಹೋಯಿತು. ಅವರ ಆ ಶ್ರದ್ಧೆ ಮತ್ತು ಧೈರ್ಯ ನನಗೆ ಅತ್ಯಂತ ಪ್ರೇರಣೆಯಾಯಿತು ಎಂದು ಹುಮಾ ಖುರೇಷಿ ವೇದಿಕೆಯಲ್ಲಿ ಹೆಮ್ಮೆಯಿಂದ ಹಂಚಿಕೊಂಡರು.
ಗೀತು ಮೋಹನ್ ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಾಕಿ ಭಾಯ್ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಷಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
“>

