ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸಾರ್ವಜನಿಕರ ರಕ್ಷಣೆಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯದ ವಿವಿಧ 11 ಜಿಲ್ಲೆಗಳಲ್ಲಿ ಒಟ್ಟು 12 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸುವುದಾಗಿ ಸಿಎಂ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಂಡಿಸಿದ ಬಜೆಟ್‌ನಲ್ಲಿ, ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಆಯಕಟ್ಟಿನ ಪ್ರದೇಶಗಳಲ್ಲಿ ಈ ಠಾಣೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಯಾವ ಜಿಲ್ಲೆಯಲ್ಲಿ ಯಾವ ಹೊಸ ಠಾಣೆ?
| ಕ್ರ.ಸಂ. | ಜಿಲ್ಲೆ | ಪೊಲೀಸ್ ಠಾಣೆ |
|---|---|---|
| 1 | ದಕ್ಷಿಣ ಕನ್ನಡ | ಮಾಣಿ ಪೊಲೀಸ್ ಠಾಣೆ |
| 2 | ದಕ್ಷಿಣ ಕನ್ನಡ | ಸಜಿಪನಡು ಪೊಲೀಸ್ ಠಾಣೆ |
| 3 | ಬೆಂಗಳೂರು ಗ್ರಾಮಾಂತರ | ದೊಡ್ಡಬಳ್ಳಾಪುರ ಸಂಚಾರ ಪೊಲೀಸ್ ಠಾಣೆ |
| 4 | ಬೆಳಗಾವಿ | ಯರಗಟ್ಟಿ ಪೊಲೀಸ್ ಠಾಣೆ |
| 5 | ಯಾದಗಿರಿ | ಕಕ್ಕೇರಾ ಪೊಲೀಸ್ ಠಾಣೆ |
| 6 | ಚಿತ್ರದುರ್ಗ | ಹಿರಿಯೂರು ಸಂಚಾರ ಪೊಲೀಸ್ ಠಾಣೆ |
| 7 | ದಾವಣಗೆರೆ | ಆನಗೋಡು ಪೊಲೀಸ್ ಠಾಣೆ |
| 8 | ಹಾವೇರಿ | ತಿಳುವಳ್ಳಿ ಪೊಲೀಸ್ ಠಾಣೆ |
| 9 | ಮೈಸೂರು | ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ |
| 10 | ವಿಜಯಪುರ | ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ |
| 11 | ಕೋಲಾರ | ನರಸಾಪುರ ಕೈಗಾರಿಕಾ ವಲಯ ಪೊಲೀಸ್ ಠಾಣೆ |
| 12 | ಚಾಮರಾಜನಗರ | ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆ |
ಜನರ ರಕ್ಷಣೆಗೆ ಹೆಚ್ಚಿನ ಒತ್ತು
ಈ ಹೊಸ ಠಾಣೆಗಳ ಸ್ಥಾಪನೆಯಿಂದ ಆಯಾ ಭಾಗದ ಜನರಿಗೆ ತುರ್ತು ಸಂದರ್ಭಗಳಲ್ಲಿ ಶೀಘ್ರವಾಗಿ ಪೊಲೀಸ್ ನೆರವು ಸಿಗಲಿದೆ. ವಿಶೇಷವಾಗಿ ಸಂಚಾರ ದಟ್ಟಣೆ ಹೆಚ್ಚಿರುವ ದೊಡ್ಡಬಳ್ಳಾಪುರ, ಹಿರಿಯೂರು ಮತ್ತು ಗುಂಡ್ಲುಪೇಟೆಗಳಲ್ಲಿ ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳು ಆರಂಭವಾಗುತ್ತಿರುವುದು ಸವಾರರಿಗೆ ನಿರಾಳ ತಂದಿದೆ. ಅಲ್ಲದೆ, ಕೈಗಾರಿಕಾ ಪ್ರದೇಶವಾದ ನರಸಾಪುರದಲ್ಲಿ ಪ್ರತ್ಯೇಕ ಠಾಣೆ ಸ್ಥಾಪನೆ ಮಾಡುವ ಮೂಲಕ ಕೈಗಾರಿಕೆಗಳ ಸುರಕ್ಷತೆಗೂ ಸರ್ಕಾರ ಒತ್ತು ನೀಡಿದೆ.

