HomeKarnatakaಕರ್ನಾಟಕ ಬಜೆಟ್ 2026: ನೀರಿನಲ್ಲಿ ಹೋಮ ಮಾಡಿದ ಸಿದ್ದರಾಮಯ್ಯ ಬಜೆಟ್!

ಕರ್ನಾಟಕ ಬಜೆಟ್ 2026: ನೀರಿನಲ್ಲಿ ಹೋಮ ಮಾಡಿದ ಸಿದ್ದರಾಮಯ್ಯ ಬಜೆಟ್!

ಕರ್ನಾಟಕದ ಧೀರ್ಘಾವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರ ಶುಕ್ರವಾರ ಕರ್ನಾಟಕ ಬಜೆಟ್-2026 ಮಂಡಿಸಿದರು. ಇದು ಸಿದ್ದರಾಮಯ್ಯ ಅವರ ದಾಖಲೆಯ 17ನೇ ಬಜೆಟ್‌. ಈ ಬಾರಿ 4.49 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ ಅವರು ಹಲವಾರು ಘೋಷಣೆಗಳನ್ನು ಮಾಡಿದರು.

ಕರ್ನಾಟಕದ ಪ್ರತಿಪಕ್ಷಗಳು ಸಿದ್ದರಾಮಯ್ಯ ಬಜೆಟ್ ಟೀಕಿಸಿವೆ. ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಬಜೆಟ್ ಟೀಕಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

‘ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ದಿನಗಳವರೆಗೆ ಮುಖ್ಯಮಂತ್ರಿಯಾಗಿ ತಾವು ಪಡೆದ ಅನುಭವವನ್ನು ಸಂಪೂರ್ಣ ನೀರಿನಲ್ಲಿ ಹೋಮ ಮಾಡಿದ್ದಾರೆ!’ ಎಂದು ಟೀಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಮಂಡಿಸಿರುವ 17ನೇ ಬಜೆಟ್ ಕರ್ನಾಟಕವನ್ನು ಅಭಿವೃದ್ಧಿಯ ಹಾದಿಯಿಂದ ಮತ್ತಷ್ಟು ದೂರಕ್ಕೆ ತಳ್ಳಿ, ‘ಸಾಲದ ಸುಳಿ’ಗೆ ಸಿಲುಕಿಸುತ್ತಿರುವ ಕರಾಳ ಅಧ್ಯಾಯವಾಗಿದೆ. ಇವರ ಪಂಚ ಗ್ಯಾರಂಟಿಗಳಿಗೆ ಪ್ರತ್ಯೇಕ ಅನುದಾನ ನಿಗದಿ ಮಾಡದೆ ಆಯಾ ಇಲಾಖೆಗಳ ಅನುದಾನವನ್ನೇ ಕಡಿತ ಮಾಡಿ ಪಂಚ ಗ್ಯಾರಂಟಿಗೆ ಜೋಡಿಸಲಾಗಿದೆ. ಪರಿಣಾಮವಾಗಿ ಒಂದೆಡೆ ಆಯಾ ಇಲಾಖೆಗಳ ಅಭಿವೃದ್ಧಿ ಯೋಜನೆಗಳಿಗೆ ಪೆಟ್ಟು ಬೀಳುತ್ತದೆ. ಮತ್ತೊಂದೆಡೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅಭಿವೃದ್ಧಿಗಾಗಿ ಮೀಸಲಿರುವ ವಿಶೇಷ ಕಾಯ್ದೆಯ ಅನುದಾನವನ್ನು ಯಥೇಚ್ಛವಾಗಿ ಗ್ಯಾರಂಟಿಗೆ ಡೈವರ್ಟ್ ಮಾಡಲು ಸರಕಾರ ತನ್ನ ಹುನ್ನಾರವನ್ನು ಮುಂದುವರಿಸಿದೆ’ ಎಂದು ಆರೋಪಿಸಿದ್ದಾರೆ.

‘ಬಂಡವಾಳ ವೆಚ್ಚದಲ್ಲಿ ಅಲ್ಪ ಏರಿಕೆ ಮಾಡಿ, ಅಭಿವೃದ್ಧಿಗೆ ಬ್ರೇಕ್ ಹಾಕಿರುವ ಈ ಕಾಂಗ್ರೆಸ್ ಸರ್ಕಾರ, ರಾಜ್ಯದ ಭವಿಷ್ಯವನ್ನು ಅಡವಿಟ್ಟಿದೆ. ಸಾರ್ವಜನಿಕ ಸಾಲ ಒಟ್ಟು 8.24 ಲಕ್ಷ ಕೋಟಿ ರೂ.ಗೆ ಏರಿಸಿರುವುದು ಪ್ರತಿ ಕನ್ನಡಿಗನಿಗೆ ಈ ಕಾಂಗ್ರೆಸ್ ಸರ್ಕಾರ ನೀಡಿರುವ ‘ಉಡುಗೊರೆ’!’ ಎಂದು ಟೀಕಿಸಿದ್ದಾರೆ.

‘ಸತತ ಮೂರನೇ ವರ್ಷವೂ ಈ ಕಾಂಗ್ರೆಸ್ ಸರ್ಕಾರ ಸರ್ಕಾರ ರಾಜಸ್ವ ಕೊರತೆಯ ಬಜೆಟ್ ಮಂಡಿಸಿರುವುದು ಆರ್ಥಿಕ ದಿವಾಳಿತನದ ಸಂಕೇತ. 22,957 ಕೋಟಿ ರೂ. ಕೊರತೆಯನ್ನು ನೀಗಿಸಲು ಮತ್ತು ದೈನಂದಿನ ತುಪ್ಪ ತಿನ್ನಲು ಸಾಲ ಮಾಡುತ್ತಿರುವ ಈ ನಡೆ ಅಪಾಯಕಾರಿ. ಸಂಪತ್ತು ಸೃಜಿಸದ, ಕೇವಲ ಅನುಭೋಗಿ ವೆಚ್ಚಕ್ಕೆ (Revenue Expenditure) 1.32 ಲಕ್ಷ ಕೋಟಿ ರೂ. ಹೊಸ ಸಾಲ ಮಾಡುವುದು ಮುಂದಿನ ಪೀಳಿಗೆಗೆ ಮಾಡುವ ದ್ರೋಹವಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ 44,632 ಕೋಟಿ ರೂ ಮೀಸಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಈ ಸರ್ಕಾರ, ದಲಿತರ ಕಾಲೋನಿಗಳ ಅಭಿವೃದ್ಧಿಗೆ ಮತ್ತು ಮೂಲಸೌಕರ್ಯಕ್ಕೆ ನೀಡಿರುವುದು ಕೇವಲ 1,332 ಕೋಟಿ ರೂ. ಮಾತ್ರ! ಅಂದರೆ ಒಟ್ಟು ನಿಧಿಯ ಶೇ. 97ರಷ್ಟು ಹಣ ಬಡಾವಣೆಗಳ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ. ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಬಜೆಟ್ ಗಾತ್ರ ಹೆಚ್ಚಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ವಾಸ್ತವದಲ್ಲಿ ಆ ಹಣವನ್ನು ತಮ್ಮ ಗ್ಯಾರಂಟಿ ಸಾಲ ತೀರಿಸಲು ಬಳಸುತ್ತಿದ್ದಾರೆ. ಇದು ದಲಿತರಿಗೆ ನೀಡಿದ ‘ಭಾಗ್ಯ’ವಲ್ಲ, ಇದು ಅವರ ಭವಿಷ್ಯಕ್ಕೆ ಮಾಡಿರುವ ‘ದ್ರೋಹ’ ವಲ್ಲವೇ ಮುಖ್ಯಮಂತ್ರಿಗಳೇ?’ ಎಂದು ಕೇಳಿದ್ದಾರೆ.

‘ಅಬಕಾರಿ ನೀತಿಯಲ್ಲಿ ಮದ್ಯದ ಕಂಪನಿಗಳಿಗೆ ಬೆಲೆ ನಿರ್ಧರಿಸುವ ಅಧಿಕಾರ ನೀಡಿರುವುದು ‘ಲಿಕ್ಕರ್ ಲಾಬಿ’ಗೆ ಈ ಕಾಂಗ್ರೆಸ್ ಸರ್ಕಾರ ಶರಣಾಗಿರುವುದಕ್ಕೆ ಸಾಕ್ಷಿ. ಇನ್ನೊಂದೆಡೆ, ಶಾಲೆಗಳ ಪೀಠೋಪಕರಣಕ್ಕೆ ಕೇವಲ 25 ಕೋಟಿ ರೂ. ನೀಡಿ, ಸೋಶಿಯಲ್ ಮೀಡಿಯಾ ನಿಷೇಧದಂತಹ ‘ಗಿಮಿಕ್’ ಘೋಷಣೆ ಮಾಡುತ್ತಿರುವುದು ಹಾಸ್ಯಾಸ್ಪದ! ನಿಷೇಧವನ್ನು ಹೇಗೆ ಮಾಡುತ್ತದೆ ಎಂದು ಹೇಳದೆ, ತನ್ನ ಕಾರ್ಯವ್ಯಾಪ್ತಿಯ ಹೊರಗಿರುವುದನ್ನು ಹೇಳದೆ, ತಾಂತ್ರಿಕವಾಗಿ ಜಾರಿಗೊಳಿಸಲು ಅಸಾಧ್ಯವಾದ ಇಂತಹ ಹಗಲುಗನಸಿನ ಘೋಷಣೆಗಳು ಕೇವಲ ಜನರ ಗಮನವನ್ನು ಈ ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಬೇರೆಡೆಗೆ ಸೆಳೆಯುವ ತಂತ್ರವಷ್ಟೇ! ಮೂಲಸೌಕರ್ಯ ನೀಡಲು ಯೋಗ್ಯತೆ ಇಲ್ಲದ ಸರ್ಕಾರ, ಮಕ್ಕಳ ಮೇಲಿನ ಕಾಳಜಿಯ ನಾಟಕವಾಡುತ್ತಾ ‘ಬುರುಡೆ’ ಘೋಷಣೆಗಳ ಮೂಲಕ ಪೋಷಕರ ಹಾದಿ ತಪ್ಪಿಸುತ್ತಿದೆ’ ಎಂದು ಬಜೆಟ್ ವಿಶ್ಲೇಸಿಸಿದ್ದಾರೆ.

‘ಬೆಲೆ ಕುಸಿತದಿಂದ ಕಂಗಾಲಾಗಿರುವ ನಮ್ಮ ಅನ್ನದಾತ ರೈತರಿಗೆ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಕೇವಲ 100 ಕೋಟಿ ರೂ ನೀಡಿರುವುದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ! ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರತಿ ಬಾರಿಯಂತೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಿಗೆ ಹವ್ಯಾಸವಾಗಿಬಿಟ್ಟಿದೆ. ಇದು ಪ್ರಗತಿಪರ ಬಜೆಟ್ ಅಲ್ಲ, ಇದು ಕರ್ನಾಟಕದ ಪಾಲಿಗೆ ಮತ್ತೊಂದು ಪೊಳ್ಳು ಭರವಸೆಯ ಬಜೆಟ್. ಕಾಂಗ್ರೆಸ್ ಅಧಿಕಾರಕ್ಕೆ ಬಂದ 3 ವರ್ಷದಿಂದ ರಾಜ್ಯದ ಪ್ರಗತಿ ರಥಕ್ಕೆ ಹಾಕಿರುವ ಬ್ರೇಕ್ ಅನ್ನು ಈ ಬಾರಿಯೂ ತೆಗೆದಿಲ್ಲ ಅನ್ನುವುದೇ ವಾಸ್ತವ!’ ಎಂದು ವಿಜಯೇಂದ್ರ ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular