ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ರಣ ಬಿಸಿಲು ದಗೆ ಆರಂಭವಾಗಿದ್ದು, ಜನರು ತತ್ತರಿಸಿ ಹೋಗುವಂತಾಗಿದೆ. ಕೆಂಡದಂತಹ ಬಿಸಿಲು ಎಂದರೆ ಬಹುಶಃ ಇದೇ ಇರಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಜನರು ಬಸವಳಿದು ಹೋಗುತ್ತಿದ್ದಾರೆ.
ಕರಾವಳಿ ಕರ್ನಾಟಕದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಹೀಟ್ ಸ್ಟ್ರೋಕ್ ಸಂಭವಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿಪರೀತ ಸೆಕೆ, ಬಿಸಿಲ ಝಳ ಹೆಚ್ಚುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಸಿಲ ಬೇಗೆ ಜನರನ್ನು ಹೈರಾಣಾಗಿಸಿದೆ. ದಿನದಿಂದ ದಿನಕ್ಕೆ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸಾರ್ವಜನಿಕರು ಉರಿ ಸೆಕೆಗೆ ಸುಸ್ತಾಗುತ್ತಿದ್ದಾರೆ. ಈ ನಡುವೆ ಉಷ್ಣಾಂಶ ಹೆಚ್ಚಳದಿಂದಾಗಿ ‘ಶಾಖಾಘಾತ (Heat Stroke)’ ಸಂಭವಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸಾಮಾನ್ಯ ಉಷ್ಣತೆಗಿಂತ 4.5 ಡಿಗ್ರಿ ಸೆಲ್ಶಿಯಸ್ನಿಂದ 6.4 ಡಿಗ್ರಿ ಸೆಲ್ಶಿಯಸ್ನಷ್ಟು ತಾಪಮಾನ ಹೆಚ್ಚಾದಲ್ಲಿ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದೆ. ಪರಿಣಾಮವಾಗಿ ಮೈಮೇಲೆ ಬೆವರುಸಾಲೆ, ಮಾಂಸಖಂಡಗಳ ಸೆಳೆತ, ತಲೆಸುತ್ತುವಿಕೆ ಉಂಟಾಗಬಹುದು. ತೀವ್ರತರದ ಹಂತದಲ್ಲಿ ಇದು ಎದೆಯುರಿ, ಸೆಳೆತ ಹಾಗೂ ಹೃದಯಾಘಾತಕ್ಕೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮಹತ್ವದ ಸೂಚನೆ ನೀಡಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಅನಗತ್ಯವಾಗಿ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.
ಸಾಕಷ್ಟು ನೀರು ಕುಡಿಯಿರಿ. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಿ.
ಹಗುರವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ, ಟೋಪಿ ಮತ್ತು ಕನ್ನಡಕ ಬಳಸಿ.
ಮಕ್ಕಳನ್ನು ಮಧ್ಯಾಹ್ನದ ಬಿಸಿಲಿನಲ್ಲಿ ಆಟವಾಡಲು ಬಿಡಬೇಡಿ ಎಂದು ತಿಳಿಸಿದೆ.
ಬಿಸಿಲಿನ ಝಳ ಮೀನುಗಾರಿಕೆಗೂ ಹೊಡೆತ ನೀಡಿದೆ. ಸಮುದ್ರದ ಮೇಲ್ಮೈ ನೀರು ಬಿಸಿಯಾಗುತ್ತಿರುವುದರಿಂದ ಮೀನುಗಳು ಸಮುದ್ರದಾಳಕ್ಕೆ ಹೋಗಿ ಸೇರುತ್ತಿವೆ. ಇದರಿಂದಾಗಿ ಮೀನುಗಾರರ ಬಲೆಗೆ ಮೀನುಗಳು ಬೀಳುತ್ತಿಲ್ಲ, ಇದು ಮೀನುಗಾರರನ್ನು ಆತಂಕಕ್ಕೆ ತಳ್ಳಿದೆ.
ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹೀಟ್ ಸ್ಟ್ರೋಕ್ ಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಜನರು ಅತೀ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.

