ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್-1 ಸಿನಿಮಾದ ದೈವ ಪಾತ್ರದ ಬಗ್ಗೆ ಅಪಮಾನಕಾರಿ ಸನ್ನೆ ಮಾಡಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್, ದೂರುದಾರರೊಂದಿಗೆ ಚರ್ಚಿಸಿ ಅವರಿಗೆ ತೃಪ್ತಿಯಾಗುವ ಭಾಷೆಯಲ್ಲಿ ಪರಿಷ್ಕೃತ ಕ್ಷಮಾಪಣಾ ಪ್ರಮಾಣ ಪತ್ರ ಸಲ್ಲಿಸುವುದಾಗಿ ಹೈಕೋರ್ಟ್ಗೆ ತಿಳಿಸಿದ್ದಾರೆ.
ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಚಾಪ್ಟರ್-1 ಚಿತ್ರದ ಚಾಮುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪದಡಿ ರಣವೀರ್ ಸಿಂಗ್ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಕೂಡ ದಾಖಲಾಗಿತ್ತು. ತನ್ನ ವಿರುದ್ಧ ದಾಖಲಾಗಿರುವ ದೂರು ಹಾಗೂ ಎಫ್ಐಆರ್ ರದ್ದುಪಡಿಸುವಂತೆ ಕೋರಿ, ರಣವೀರ್ ಸಿಂಗ್ ಕರ್ನಾಟಕ್ ಅಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ವಿಚಾರಣೆ ನಡೆಸಿದರು.
ವಿಚಾರಣೆಯ ವೇಳೆ ದೂರುದಾರರ ಪರ ವಕೀಲರು, ಅರ್ಜಿದಾರ ರಣವೀರ್ ಸಿಂಗ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪಶ್ಚಾತ್ತಾಪವಿಲ್ಲ. ದೂರು ನೀಡಿರುವುದೇ ತಪ್ಪು ಎಂಬಂತೆ ಬಿಂಬಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು, ದೂರುದಾರರೊಂದಿಗೆ ಚರ್ಚಿಸಿ ಅವರಿಗೆ ತೃಪ್ತಿಯಾಗುವ ಭಾಷೆಯಲ್ಲಿಯೇ ಪರಿಷ್ಕೃತ ಪ್ರಮಾಣ ಪತ್ರ ಸಲ್ಲಿಸುವುದಾಗಿ ಹೇಳಿದರು.
ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಕ್ಷಮೆಯಾಚನೆಯ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದೇ 18ರಂದು ಮೈಸೂರಿನಲ್ಲಿರುವ ದೇವಸ್ಥಾನಕ್ಕೂ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು. ರಣವೀರ್ ಸಿಂಗ್ ಅವರ ಪ್ರಮಾಣ ಪತ್ರದಲ್ಲಿರುವ ಅಂಶಗಳನ್ನು ಓದಿ ಪೀಠಕ್ಕೆ ತಿಳಿಸಿದರು.
ಪ್ರಮಾಣ ಪತ್ರಕ್ಕೆ ದೂರುದಾರರ ಪರ ವಕೀಲರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿ ಪರಿಷ್ಕೃತ ಪ್ರಮಾಣ ಪತ್ರ ಸಲ್ಲಿಸುವುದಾಗಿ ಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ದೂರುದಾರರ ತೃಪ್ತಿಗೆ ಅನುಗುಣವಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಮೌಖಿಕವಾಗಿ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದೆ.

