ಬೆಂಗಳೂರು: ವ್ಯಕ್ತಿಯೊಬ್ಬ ಝಾಂಬಿ ಡ್ರಗ್ಸ್ ಅಥವಾ ಝೈಲಾಜಿನ್ ಸೇವಿಸಿದ್ದಾನೆ ಎಂದು ವಿಡಿಯೋ ಮಾಡಿ ಹರಿಬಿಟ್ಟು ತಪ್ಪು ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಯುವಕನನ್ನು ಬೆಂಗಳೂರಿನ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೇಮಂತ್ (29) ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದ ಮೂಲಕ ತಪ್ಪು ಸಂದೇಶದ ವಿಡಿಯೋ ಹಂಚಿಕೊಂಡಿದ್ದ ಹಿನ್ನೆಲೆಯಲ್ಲಿ ಈತನನು ಬಂಧಿಸಲಾಗಿದೆ.
ಬಾಗಲೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮೈಮೇಲೆ ಪ್ರಜ್ಞೆ ಇಲ್ಲದವನಂತೆ ವಿಚಿತ್ರವಾಗಿ ಕೈ ಕಾಲುಗಳನ್ನು ಆಡಿಸುತ್ತಾ ನಿಂತಿದ್ದ. ಆತ ಎಲ್ಲಿಗೆ ಹೋಗುತ್ತಿದ್ದಾನೆ ಅಥವಾ ಏನು ಮಾಡುತ್ತಿದ್ದಾನೆ ಎಂಬ ಅರಿವಿಲ್ಲದಂತೆ ವರ್ತಿಸುತ್ತಿದ್ದುದನ್ನ ಕಂಡ ಆರೋಪಿ, ವಿದೇಶಗಳಲ್ಲಿ ಕಂಡುಬರುವ ಝಾಂಬಿ ಡ್ರಗ್ಸ್ ಅಥವಾ ಝೈಲಾಜಿನ್ ನಶೆಯಲ್ಲಿ ಈ ವ್ಯಕ್ತಿ ವಿಚಿತ್ರವಾಗಿ ವರ್ತನೆ ಮಾಡುತ್ತಿರಬಹುದು ಎಂದು ಶಂಕಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ.
ಈ ಸಂಬಂಧ, ಬಾಗಲೂರು ಪೊಲೀಸ್ ಠಾಣೆಯ ಪೊಲೀಸರು ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಸಂಸ್ಥೆ ಸಮೀಪದಲ್ಲಿ ಆ ವ್ಯಕ್ತಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡು ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯಕೀಯ ವರದಿಗಳ ಪ್ರಕಾರ, ಆ ವ್ಯಕ್ತಿಯು ಯಾವುದೇ ಮಾದಕವಸ್ತು ಅಥವಾ ಮನೋಪ್ರೇರಕ ಪದಾರ್ಥಗಳನ್ನು ಸೇವಿಸಿರುವುದಿಲ್ಲ ಎಂದು ದೃಢಪಟ್ಟಿತ್ತು. ವಿಚಾರಣೆ ವೇಳೆಯಲ್ಲಿ ಆ ವ್ಯಕ್ತಿಗೆ ಸಂಧಿವಾತ (ಆರ್ಥೈಟಿಸ್) ಇರುವುದಾಗಿ ತಿಳಿದುಬಂದಿದ್ದು, ವೈದ್ಯರು ನೀಡಿದ ನೋವು ನಿವಾರಕ ಔಷಧಗಳೊಂದಿಗೆ ಮದ್ಯ ಸೇವಿಸಿದ್ದರಿಂದ ಒಂದೇ ಕಡೆ ನಿಂತಿರುವ ಸ್ಥಿತಿಯಲ್ಲಿರುವಂತೆ ವಿಡಿಯೋದಲ್ಲಿ ಕಂಡುಬಂದಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಪ್ಪು ಮಾಹಿತಿ ನೀಡುವ ವಿಡಿಯೋ ಅಪ್‌ಲೋಡ್ ಮಾಡಿದ್ದ ವ್ಯಕ್ತಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿರುವ ಹೇಮಂತ್ ಕ್ಷಮೆ ಯಾಚಿಸಿ ವಿಡಿಯೋ ಮಾಡಿದ್ದಾನೆ.
ವಿದೇಶಗಳಲ್ಲಿ ಇಂತಹ ಡ್ರಗ್ಸ್ ಇದೆ ಎಂಬ ಕಾರಣಕ್ಕೆ ಆತ ಇಲ್ಲೂ ಅದೇ ರೀತಿ ಇರಬಹುದು ಎಂದು ಊಹಿಸಿ ವಿಡಿಯೋ ಮಾಡಿದ್ದಾನೆ. ಯಾರೇ ಆಗಲಿ ಆಧಾರರಹಿತ ಮಾಹಿತಿ ಅಥವಾ ವಿಡಿಯೋಗಳನ್ನು ಶೇರ್ ಮಾಡಬಾರದು. ಈ ಸುಳ್ಳು ವಿಡಿಯೋವನ್ನು ಯಾರೆಲ್ಲಾ ಶೇರ್ ಮಾಡಿದ್ದಾರೋ, ಅವರೆಲ್ಲರಿಗೂ ನೋಟಿಸ್ ನೀಡಲಿದ್ದೇವೆ. ಸಾರ್ವಜನಿಕರು ಇಂತಹ ಯಾವುದೇ ದೃಢೀಕರಿಸದ ವಿಡಿಯೋಗಳನ್ನು ನಂಬಬಾರದು ಮತ್ತು ಶೇರ್ ಮಾಡಬಾರದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

