ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಥಳೀಯ ಆಡಳಿತದ ಬೇಜವಾಬ್ದಾರಿಗೆ ಅಮಾಯಕ ಸವಾರರೊಬ್ಬರು ಬಲಿಯಾಗುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ಘಟನೆ ವರದಿಯಾಗಿದೆ. ಆಹಾರ ಪದಾರ್ಥಗಳನ್ನು ತಲುಪಿಸಲು ತೆರಳುತ್ತಿದ್ದ ಯುವಕನೊಬ್ಬ, ರಸ್ತೆ ಮಧ್ಯದಲ್ಲೇ ಅಗೆದು ಹಾಗೆಯೇ ಬಿಡಲಾಗಿದ್ದ ತೆರೆದ ಒಳಚರಂಡಿ ಗುಂಡಿಯೊಳಗೆ ವಾಹನ ಸಮೇತ ಬಿದ್ದಿದ್ದಾನೆ. ಈ ಬೆಚ್ಚಿಬೀಳಿಸುವ ದೃಶ್ಯ ಸಮೀಪದ ಕಣ್ಗಾವಲು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಜಾಜ್ಮೌ ಪ್ರದೇಶದ ಹಿಂದೂಸ್ತಾನ್ ಕಾಂಪೌಂಡ್ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ 12:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಸುಭಾಷ್ ರಸ್ತೆ ನಿವಾಸಿ 27 ವರ್ಷದ ನಿತಿನ್ ಗುಪ್ತಾ ಎಂಬ ಯುವಕ ಎಂದಿನಂತೆ ಗ್ರಾಹಕರಿಗೆ ಪದಾರ್ಥಗಳನ್ನು ತಲುಪಿಸಲು ದ್ವಿಚಕ್ರ ವಾಹನದಲ್ಲಿ ಸೇತುವೆಯ ಕಡೆಯಿಂದ ಬರುತ್ತಿದ್ದನು. ಈ ಮಾರ್ಗದಲ್ಲಿ ಬೀದಿ ದೀಪಗಳು ಸರಿಯಾಗಿ ಬೆಳಗದೆ ಇಡೀ ರಸ್ತೆ ಕಗ್ಗತ್ತಲೆಯಿಂದ ಕೂಡಿತ್ತು. ಈ ವೇಳೆ ರಸ್ತೆಯ ನಡುಭಾಗದಲ್ಲೇ ಇದ್ದ ಬೃಹತ್ ಗುಂಡಿ ಕತ್ತಲಿನಲ್ಲಿ ಆತನ ಗಮನಕ್ಕೆ ಬಂದಿಲ್ಲ. ಪರಿಣಾಮವಾಗಿ ಆತ ವಾಹನದ ಸಮೇತ ನೇರವಾಗಿ ಆಳವಾದ ಹೊಂಡಕ್ಕೆ ಧುಮುಕಿದ್ದಾನೆ.
ಬಿದ್ದ ರಭಸಕ್ಕೆ ದ್ವಿಚಕ್ರ ವಾಹನ ಯುವಕನ ಮೇಲೆಯೇ ಬಿದ್ದಿದ್ದು, ಆತ ಅದರಿಂದ ಹೊರಬರಲಾರದೆ ಚೀರಾಡಿದ್ದಾನೆ. ಆತನ ಆರ್ತನಾದ ಕೇಳಿ ಸ್ಥಳೀಯ ನಿವಾಸಿಗಳು ತಕ್ಷಣವೇ ಧಾವಿಸಿ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಹರಸಾಹಸಪಟ್ಟು ಯುವಕ ಹಾಗೂ ಆತನ ವಾಹನವನ್ನು ಗುಂಡಿಯಿಂದ ಮೇಲಕ್ಕೆತ್ತಿದ್ದಾರೆ. ರಕ್ಷಣೆಯಾದ ಯುವಕನ ಮೂಗಿನ ಮೂಳೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣವೇ ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ತಲೆಯ ಮೇಲೆ ಹೆಲ್ಮೆಟ್ ಧರಿಸಿದ್ದ ಕಾರಣ ಆತನಿಗೆ ಪ್ರಾಣಾಪಾಯ ಉಂಟಾಗದೆ ದೊಡ್ಡ ಅನಾಹುತ ತಪ್ಪಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಆತನನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಸ್ಥಳೀಯರ ಪ್ರಕಾರ, ಒಳಚರಂಡಿ ಕೊಳವೆ ಒಡೆದು ರಸ್ತೆ ಕುಸಿದಿದ್ದ ಕಾರಣ ಸುಮಾರು 15 ದಿನಗಳ ಹಿಂದೆ ನಗರ ಪಾಲಿಕೆಯವರು ದುರಸ್ತಿ ಕಾರ್ಯ ಕೈಗೊಂಡಿದ್ದರು. ದೊಡ್ಡ ಕೊಳವೆ ಅಳವಡಿಸಿ ದುರಸ್ತಿ ಮಾಡಿದ ನಂತರ, ಸುಮಾರು 4 ಅಡಿ ಆಳ ಹಾಗೂ 11 ಮೀಟರ್ ಉದ್ದದ ಈ ಕಂದಕವನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಕನಿಷ್ಠಪಕ್ಷ ಆ ಜಾಗದಲ್ಲಿ ಅಪಾಯವನ್ನು ಸೂಚಿಸುವ ಯಾವುದೇ ಎಚ್ಚರಿಕೆ ಫಲಕಗಳಾಗಲಿ ಅಥವಾ ತಡೆಗೋಡೆಗಳನ್ನಾಗಲಿ ಅಳವಡಿಸಿರಲಿಲ್ಲ. ಜೊತೆಗೆ ಬೀದಿ ದೀಪಗಳ ಕಂಬಗಳಿದ್ದರೂ ಅವುಗಳಲ್ಲಿ ಬೆಳಕು ಇರಲಿಲ್ಲ.
ಹಿಂದೆಯೂ ಇದೇ ಸ್ಥಳದಲ್ಲಿ ಹಲವು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಸಣ್ಣಪುಟ್ಟ ಆಘಾತಗಳಿಗೆ ತುತ್ತಾಗಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕತ್ತಲಿನಲ್ಲಿ ಸವಾರರಿಗೆ ಈ ಅಪಾಯದ ಅರಿವೇ ಆಗುತ್ತಿರಲಿಲ್ಲ. ದುರಂತ ಸಂಭವಿಸಿದ ನಂತರ ಎಚ್ಚೆತ್ತುಕೊಂಡಿರುವ ಸ್ಥಳೀಯ ಮುಖಂಡರು, ಒಳಚರಂಡಿ ಕಾಮಗಾರಿ ಮುಕ್ತಾಯಗೊಂಡಿದ್ದು ಶೀಘ್ರದಲ್ಲೇ ಗುಂಡಿಯನ್ನು ಮುಚ್ಚಿ ರಸ್ತೆಯನ್ನು ಸಮತಟ್ಟು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ಕೆಲಸ ಮುಗಿದ ನಂತರವೂ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಜೀವದ ಜೊತೆ ಚೆಲ್ಲಾಟವಾಡುವ ಅಧಿಕಾರಿಗಳ ವಿರುದ್ಧ ಜನರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

