ಕಲಬುರಗಿ: ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಮದ್ಯ ವ್ಯಸನಿಯಾಗಿದ್ದ ವತಿಯನ್ನು ಪತ್ನಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ.
ನಾಗೇಂದ್ರ ಕಾಶಪ್ಪ ಮುಧೋಳ(32) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಸುಧಾರಾಣಿ(27) ಕೊಲೆ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಸೇಡಂ ತಾಲೂಕಿನ ಯಡ್ಡಳ್ಳಿ ಗ್ರಾಮದ ನಾಗೇಂದ್ರ ಕುರಿ ಮೇಯಿಸಲು ಪತ್ನಿಯ ತವರಾದ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದರು.
ಪ್ರತಿದಿನ ಮದ್ಯ ಸೇವನೆ ಮಾಡಿ ಬಂದು ನಾಗೇಂದ್ರ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅಲ್ಲದೇ ಪುತ್ರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಭಾನುವಾರ ರಾತ್ರಿ ಜಗಳದ ವೇಳೆ ಪುತ್ರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿದೆ. ಕೊಡಲಿಯಿಂದ ಹೊಡೆದು ಪತಿ ನಾಗೇಂದ್ರನನ್ನು ಪತ್ನಿ ಸುಧಾರಾಣಿ ಕೊಲೆ ಮಾಡಿದ್ದಾರೆ,
ನಂತರ ರಾತ್ರಿ ಗಸ್ತು ತಿರುಗಲು ಗ್ರಾಮಕ್ಕೆ ಬಂದಿದ್ದ ರಟಕಲ್ ಠಾಣೆ ಪೊಲೀಸರ ಬಳಿ ಪತಿಯನ್ನು ಕೊಲೆ ಮಾಡಿರುವುದಾಗಿ ಸುಧಾರಾಣಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾರೆ.

