ಕಲಬುರಗಿ: ಪತಿ ಹಾಗೂ ಕುಟುಂಬದವರ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಮದುವೆಯಾದ ಎರಡೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ನಗರದಲ್ಲಿ ಈ ದುರಂತ ಸಂಭವಿಸಿದ್ದು, 19 ವರ್ಷದ ಭಾಗ್ಯಶ್ರೀ ಆತ್ಮಹತ್ಯೆಗೆ ಶರಣಾದವರು. ಎರಡು ತಿಂಗಳ ಹಿಂದೆ ಭಾಗ್ಯಶ್ರೀ ಸಚಿನ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಮದುವೆಯಾದ ತಿಂಗಳಲ್ಲೇ ಪತಿ ಸಚಿನ್ ಹಾಗೂ ಮನೆಯವರು ಕಿರುಕುಳ ನೀಡುವುದು, ಹಿಂಸಿಸುವುದು ಮಾಡುತ್ತಿದ್ದರಂತೆ.
ಇದರಿಂದ ತೀವ್ರವಾಗಿ ಮನನೊಂದ ಭಾಗ್ಯಶ್ರೀ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಡೆತ್ ನೋಟ್ ನಲ್ಲಿ ಪತಿ ಹಾಗೂ ಮನೆಯವರ ಹಿಂಸೆ ಬಗ್ಗೆ ಉಲ್ಲೇಖಿಸಿದ್ದು, ತನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾಳೆ.
ಮಗಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

