HomeIndiaಹೊಸ ಪಕ್ಷ ಘೋಷಣೆ ಮಾಡಿ, ಶಪಥ ಮಾಡಿದ ಕೆಸಿಆರ್‌ ಪುತ್ರಿ ಕೆ.ಕವಿತಾ!

ಹೊಸ ಪಕ್ಷ ಘೋಷಣೆ ಮಾಡಿ, ಶಪಥ ಮಾಡಿದ ಕೆಸಿಆರ್‌ ಪುತ್ರಿ ಕೆ.ಕವಿತಾ!

ತೆಲಂಗಾಣ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್ ಅವರ ಪುತ್ರಿ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಉಚ್ಛಾಟಿತ ನಾಯಕಿ ಕೆ.ಕವಿತಾ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ ಮತ್ತು ವಿಧಾನ ಪರಿಷತ್‌ನಲ್ಲಿ ಶಪಥವೊಂದನ್ನು ಮಾಡಿದ್ದಾರೆ.

ಕೆ.ಕವಿತಾ 2024ರ ಸೆಪ್ಟೆಂಬರ್‌ನಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದು ಅಂಗೀಕಾರವಾಗಿರಲಿಲ್ಲ. ಸೋಮವಾರ ಪರಿಷತ್‌ನಲ್ಲಿ ಕೊನೆಯ ಭಾಷಣ ಮಾಡಿದ ಅವರು ಬಿಆರ್‌ಎಸ್ ಪಕ್ಷ ಮತ್ತು ತಂದೆ ಕೆ.ಚಂದ್ರಶೇಖರ್ ರಾವ್ ವಿರುದ್ಧ ಟೀಕೆಗಳನ್ನು ಮಾಡಿದರು.

“ಬಿಆರ್‌ಎಸ್‌ ಪಕ್ಷಕ್ಕಾಗಿ ನಾನು ಜೈಲುವಾಸ ಅನುಭವಿಸಿದೆ. ಆದರೆ ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಯಿತು. ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುತ್ತೇನೆ. ಪರಿಷತ್‌ನಲ್ಲಿ ಇದು ನನ್ನ ಕೊನೆಯ ಭಾಷಣ. ನಾನು ಶಾಸಕಿಯಾಗಿ ವಿಧಾನಸಭೆ ಪ್ರವೇಶ ಮಾಡುತ್ತೇನೆ” ಎಂದು ಕೆ.ಕವಿತಾ ಶಪಥ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಕೆ.ಚಂದ್ರಶೇಖರ್ ರಾವ್ ಸುತ್ತಮುತ್ತಲೂ ಇರುವವರು ನನ್ನ ವಿರುದ್ಧ ಪಿತೂರಿ ಮಾಡಿದರು. ನನ್ನನ್ನು ರಾಜಕೀಯವಾಗಿ ಬದಿಗಿಟ್ಟರು. ಅಂತಿಮವಾಗಿ ಪಕ್ಷದಿಂದಲೇ ಹೊರ ಹಾಕಿದರು. ಇದು ನನ್ನ ಕೊನೆಯ ಭಾಷಣ. ಪರಿಷತ್ ಸದಸ್ಯತ್ವಕ್ಕೆ ನಾನು ನೀಡಿದ ರಾಜೀನಾಮೆಯನ್ನು ಅಂಗೀಕಾರ ಮಾಡಿ” ಎಂದು ಕೆ.ಕವಿತಾ ಮನವಿ ಮಾಡಿದರು.

ಹೊಸ ಪಕ್ಷ ಘೋಷಣೆ: ವಿಧಾನ ಪರಿಷತ್‌ನಲ್ಲಿ ಮಾಡಿದ ಭಾಷಣದಲ್ಲಿ ಕೆ.ಕವಿತಾ ಅವರು, “ನಾನು ಹೊಸ ರಾಜಕೀಯ ಪಕ್ಷವನ್ನು ಕಟ್ಟುತ್ತೇನೆ. ತೆಲಂಗಾಣ ರಾಜ್ಯ ರಚನೆ ಚಳವಳಿ ಸಮಯದಲ್ಲಿ ರಚಿಸಿದ್ದ ಸಾಂಸ್ಕೃತಿಕ ಸಂಘಟನೆ ತೆಲಂಗಾಣ ಜಾಗೃತಿಯನ್ನು ರಾಜಕೀಯ ಪಕ್ಷವಾಗಿ ಕಟ್ಟುತ್ತೇನೆ” ಎಂದು ಘೋಷಣೆ ಮಾಡಿದರು.

“ರಾಜ್ಯದಲ್ಲಿ ಹೊಸ ಪಕ್ಷವನ್ನು ನಾನು ಕಟ್ಟುತ್ತೇನೆ. ಇದು ರಾಜ್ಯದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ. ವಿದ್ಯಾರ್ಥಿಗಳು, ಮಹಿಳೆಯರ ಪರವಾಗಿ ಕೆಲಸ ಮಾಡುತ್ತೇನೆ. ತೆಲಂಗಾಣ ಜಾಗೃತಿ ಪಕ್ಷ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ. ನಾನು ಇಂದು ಎಂಎಲ್‌ಸಿಯಾಗಿ ಸದನದಿಂದ ಹೊರ ಹೋಗುವೆ, ಶಾಸಕಿಯಾಗಿ ವಿಧಾನಸಭೆ ಪ್ರವೇಶ ಮಾಡುತ್ತೇನೆ” ಎಂದು ಕವಿತಾ ತಿಳಿಸಿದರು.

“ರಾಜ್ಯದ ಆಡಳಿತ  ಪಕ್ಷ ಬಿಆರ್‌ಎಸ್ ಪಕ್ಷದ ಒಡಕಿನ ಲಾಭವನ್ನು ಪಡೆಯಲು ಪ್ರಯತ್ನ ನಡೆಸಿದೆ. ಆಸ್ತಿ ವಿವಾದದ ಕಾರಣ ನಾನು ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಹೋರಾಟ ಆಸ್ತಿಗಾಗಿ ಅಲ್ಲ, ಸ್ವಾಭಿಮಾನಕ್ಕಾಗಿ” ಎಂದು ಕೆ.ಕವಿತಾ ಹೇಳಿದರು.

ಪಕ್ಷದಿಂದ ಉಚ್ಛಾಟನೆ: ಕೆ.ಕವಿತಾ ಅವರನ್ನು ಸೆಪ್ಟೆಂಬರ್ 2, 2024ರಂದು ಬಿಆರ್‌ಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಕೆ.ಕವಿತಾ ಅವರ ಇತ್ತೀಚಿನ ನಡವಳಿಕೆ, ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಪಕ್ಷ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿತ್ತು.

ನಿಜಾಮಾಬಾದ್ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಕೆ.ಕವಿತಾ ಬಳಿಕ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಹ ರಾಜೀನಾಮೆ ನೀಡಿದ್ದರು. ಪತ್ರಿಕಾಗೋಷ್ಠಿಯನ್ನು ನಡೆಸಿ ಪಕ್ಷದ ವಿರುದ್ಧ ಸರಣಿ ಟೀಕೆಗಳನ್ನು ಮಾಡಿದ್ದರು.

ಕಾಂಗ್ರೆಸ್ ಪಕ್ಷ ಬಿಆರ್‌ಎಸ್‌ ಅನ್ನು ಮುಗಿಸಲು ಸಂಚು ರೂಪಿಸಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಇದರ ಹಿಂದೆ ಇದ್ದಾರೆ. ಮಾಜಿ ಸಂಸದ ಸಂತೋಷ್ ಕುಮಾರ್, ಮಾಜಿ ಸಚಿವ ಹರೀಶ್ ರಾವ್ ಕೆಸಿಆರ್‌ಗೆ ಕೆಟ್ಟ ಹೆಸರು ತಂದರು. ಇವರು ರೇವಂತ್ ರೆಡ್ಡಿ ಜೊತ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು.

ಕೆ. ಕವಿತಾ ಅವರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು. ಅವರು 5 ತಿಂಗಳ ಕಾಲ ಜೈಲಿನಲ್ಲಿದ್ದರು. 2024ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular