ಹರಿಯಾಣದ ಪಂಚಕುಲದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಚಂಡಿಮಂದಿರ ಕ್ಯಾಂಟನ್ಮೆಂಟ್ ಪ್ರದೇಶದಲ್ಲಿ ಸುಮಾರು ಒಂಬತ್ತು ವರ್ಷಗಳಿಂದ ಸ್ಥಳೀಯರೊಂದಿಗೆ ಕುಟುಂಬದ ಸದಸ್ಯನಂತೆ ಬದುಕಿದ್ದ ಬೀದಿ ನಾಯಿಯನ್ನು ಕೊಲ್ಲಲು ಓರ್ವ ಮಹಿಳೆ ಸುಪಾರಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಡಿಸೆಂಬರ್ 5 ರಂದು ಈ ನಾಯಿಯ ಮೃತದೇಹ ಹೂತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆ ನಡೆಸಿದಾಗ, ಆ ಮಹಿಳೆಯ ಸಾಕು ನಾಯಿಯ ಮೇಲೆ ಈ ಬೀದಿ ನಾಯಿ ಬೊಗಳಿದ್ದ ಕಾರಣಕ್ಕೆ ಆಕೆ ಕೊಲೆ ಮಾಡಿಸಿದ್ದಾಳೆ ಎಂದು ತಿಳಿದುಬಂದಿದೆ. ಸೇನಾ ಅಧಿಕಾರಿಯ ಪತ್ನಿಯಾದ ದೆಬ್ಮಿತ್ರಾ ಅಭಿಷೇಕ್ ಪಾಲ್ ಎಂಬ ಮಹಿಳೆ ಇಬ್ಬರಿಗೆ ಸುಪಾರಿ ನೀಡಿ, ನಾಯಿಯನ್ನು ಅಪಹರಿಸಿ, ನಂತರ ಉಸಿರುಗಟ್ಟಿಸಿ ಕೊಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಸುಪಾರಿ ಪಡೆದ ಇಬ್ಬರು ವ್ಯಕ್ತಿಗಳು ಸ್ಕೂಟರ್‌ನಲ್ಲಿ ನಾಯಿಯನ್ನು ಪ್ರದೇಶದಿಂದ ಹೊರಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಂದು ನಂತರ ಹೂತು ಹಾಕಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಭಾರತದಲ್ಲಿ ನಾಯಿಗಳನ್ನು ಕೊಲ್ಲುವುದು ಗಂಭೀರ ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 428 ಮತ್ತು 429 ರ ಅಡಿಯಲ್ಲಿ ಪ್ರಾಣಿ ಹಿಂಸೆಯು ಅಪರಾಧವಾಗಿದ್ದು, ಎರಡು ಅಥವಾ ಐದು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು. ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್ 325 ರ ಅಡಿಯಲ್ಲಿಯೂ ಇಂತಹ ಅಪರಾಧಗಳನ್ನು ಪರಿಗಣಿಸಲಾಗಿದ್ದು, ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ.

