ಮೈಸೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಸಹೋದರ ಎನ್.ಜೆ. ವಾಸುದೇವನ್ ಮೈಸೂರಿನ ಬನ್ನೂರು ಪಟ್ಟಣದಲ್ಲಿ ವಿಧಿವಶರಾಗಿದ್ದಾರೆ.
ಇಂದು ಬೆಳಿಗ್ಗೆ ವಾಸುದೇವನ್ ನಿಧನರಾಗಿದ್ದು, ಅವರಿಗೆ 92 ವರ್ಷ ವಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಾಸುದೇವನ್ ಅವರು ಬನ್ನೂರು ಪಟ್ಟಣದ ಚಾಮನಹಳ್ಳಿಯಲ್ಲಿ ತನ್ನ ಸಾಕು ಮಗಳ ಮನೆಯಲ್ಲಿ ಇದ್ದರು.
ಕಳೆದ ಕೆಲವು ದಿನಗಳಿಂದ ವಾಸುದೇವನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ಮಂಗಳವಾರ ಸಂಜೆ ರಂಗರಾಜಪುರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೂಲತಃ ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಜನಿಸಿದ್ದ ಎನ್.ಜೆ. ವಾಸುದೇವನ್ ಅವರು, ರಂಗರಾಜಪುರದಲ್ಲಿ ನೆಲೆಸಿದ್ದು, ಜಮೀನ್ದಾರರಾಗಿದ್ದರು. ಈ ಮೊದಲು ಪತ್ನಿ ವೇದವಲ್ಲಿ ಹಾಗೂ ಪುತ್ರ ವೇಣುಗೋಪಾಲ್ ಜೊತೆ ಅವರು ಇದ್ದರು. ಆದರೆ, ಮಗ ವೇಣುಗೋಪಾಲ್ 12 ವರ್ಷದ ಬಾಲಕನಾಗಿದ್ದಲೇ ಮೃತಪಟ್ಟರು. ಪತ್ನಿ ವೇದವಲ್ಲಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ವಾಸುದೇವನ್ ಸಾಕು ಮಗಳಾದ ಪವಿತ್ರ, ಅಳಿಯ ಶ್ರೀಕಾಂತ್, ಮೊಮ್ಮಗ ಹಾಗೂ ಮೊಮ್ಮಗಳೊಂದಿಗೆ ವಾಸವಾಗಿದ್ದರು. ಸಹೋದರಿ ಜಯಲಲಿತಾ ತಮಿಳುನಾಡು ಸಿಎಂ ಆಗಿದ್ದಾಗ ಅವರನ್ನು ಭೇಟಿಯಾಗಲು ಎರಡು ಸಲ ಊಟಿಗೆ ಹೋಗಿದ್ದರು. ಆದರೆ, ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ.

