ಬೆಂಗಳೂರು: ಚಿತ್ರರಂಗದಲ್ಲಿ ಈಗ ಪೈರಸಿ ಎಂಬ ಭೂತ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದೆ. ಬಹುನಿರೀಕ್ಷಿತ ಜನ ನಾಯಕನ್ ಚಿತ್ರದ ದೃಶ್ಯಗಳು ಮತ್ತು ಹಾಡಿನ ತುಣುಕುಗಳು ಲೀಕ್ ಆಗಿದ್ದು, ಚಿತ್ರತಂಡ ಈಗ ಕಾನೂನು ಸಮರಕ್ಕೆ ಸಿದ್ಧವಾಗಿದೆ. ಈ ಕುರಿತು ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಪೈರಸಿ ಮಾಡುವವರಿಗೆ ಮತ್ತು ಲೀಕ್ ಆದ ವಿಡಿಯೋಗಳನ್ನು ಹಂಚಿಕೊಳ್ಳುವವರಿಗೆ ಖಡಕ್ ವಾರ್ನಿಂಗ್ ನೀಡಿದೆ.
ನೋಟಿಸ್‌ನ ಪ್ರಮುಖ ಅಂಶಗಳು
ಇಂಟರ್ನೆಟ್‌ನಲ್ಲಿ ನೀವು ಮಾಡುವ ಪ್ರತಿಯೊಂದು ಚಟುವಟಿಕೆಯನ್ನು ಟ್ರ್ಯಾಕ್ ಮಾಡಬಹುದು. ವಾಟ್ಸಾಪ್, ಟೆಲಿಗ್ರಾಮ್ ಅಥವಾ ಎಕ್ಸ್ (X) ನಲ್ಲಿ ವಿಡಿಯೋ ಹಂಚಿಕೊಂಡರೆ ಅಂತಹವರ ಐಡಿಗಳನ್ನು ಪತ್ತೆಹಚ್ಚಲು ಫೋರೆನ್ಸಿಕ್ ತನಿಖೆ ಆರಂಭಿಸಲಾಗಿದೆ.
ವಿಡಿಯೋಗಳನ್ನು ಕೇವಲ ನೋಡಿದರೂ ಅಥವಾ ಫಾರ್ವರ್ಡ್ ಮಾಡಿದರೂ ಸಹ ಅದು ಕಾಪಿರೈಟ್ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಅಂತಹವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ಸೈಬರ್ ಪೊಲೀಸರಿಗೆ ಈಗಾಗಲೇ ದೂರು ನೀಡಲಾಗಿದೆ.
ಸಾರ್ವಜನಿಕರು ಇಂತಹ ಸೋರಿಕೆಯಾದ ಚಿತ್ರದ ವಿಷಯಗಳೊಂದಿಗೆ ಯಾವುದೇ ರೀತಿಯಲ್ಲಿ ತೊಡಗಿಸಿಕೊಳ್ಳಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇದರಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ ಸ್ವಂತ ಜವಾಬ್ದಾರಿಯ ಮೇಲೆ ತಕ್ಷಣದ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನಿಮಗೆ ಇಂತಹ ವಿಷಯಗಳು (ಲಿಂಕ್‌ಗಳು ಅಥವಾ ವಿಡಿಯೋಗಳು) ಬಂದರೆ, ಅದನ್ನು ತೆರೆಯಬೇಡಿ, ಸಂಗ್ರಹಿಸಬೇಡಿ ಅಥವಾ ಯಾರಿಗೂ ಕಳುಹಿಸಬೇಡಿ. ಕೂಡಲೇ ಅದನ್ನು ಅಳಿಸಿಹಾಕಿ
ಸಿನಿಮಾ ತಂಡದ ಕಳಕಳಿಯ ಮನವಿ:
ಒಂದು ಸಿನಿಮಾ ತೆರೆಗೆ ಬರಲು ನೂರಾರು ಜನರ ವರ್ಷಗಳ ಪರಿಶ್ರಮ ಮತ್ತು ಕೋಟ್ಯಂತರ ರೂಪಾಯಿ ಹೂಡಿಕೆ ಇರುತ್ತದೆ. ಕೇವಲ ಒಂದು ಲಿಂಕ್ ಹಂಚುವ ಮೂಲಕ ಆ ಶ್ರಮಕ್ಕೆ ಪೆಟ್ಟು ನೀಡಬೇಡಿ. ಪೈರಸಿಯನ್ನು ತಡೆಗಟ್ಟಿ, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಬೆಂಬಲಿಸಿ ಎಂದು ಕೆವಿಎನ್ ಪ್ರೊಡಕ್ಷನ್ಸ್ ವಿನಂತಿಸಿದೆ.

