ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ ಜನ ನಾಯಕನ್ ಈ ವಾರವೇ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಹೆಚ್ ವಿನೋತ್ ನಿರ್ದೇಶನದ ಈ ಸಿನಿಮಾ ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಭಗವಂತ್ ಕೇಸರಿ ಚಿತ್ರದ ಅಧಿಕೃತ ರಿಮೇಕ್ ಆಗಿದೆ. ಆದರೆ ಮೂಲ ಸಿನಿಮಾವನ್ನು ಹಾಗೆಯೇ ಇಲ್ಲಿ ಬಳಸಿಕೊಳ್ಳಲಾಗಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ನಿರ್ದೇಶಕ ಹೆಚ್ ವಿನೋತ್, ಜನ ನಾಯಕನ್ ಸಿನಿಮಾದಲ್ಲಿ ಭಗವಂತ್ ಕೇಸರಿ ಕಥೆಯ ಕೇವಲ ಶೇಕಡಾ 50 ರಷ್ಟು ಭಾಗವನ್ನು ಮಾತ್ರ ಬಳಸಿಕೊಳ್ಳಲಾಗಿದೆ ಎಂದಿದ್ದಾರೆ. ಅದರಲ್ಲೂ ಚಿತ್ರದ ಮೊದಲಾರ್ಧದಲ್ಲಿ ಶೇಕಡಾ 60 ರಷ್ಟು ಮೂಲ ಕಥೆ ಇದ್ದರೆ, ದ್ವಿತೀಯಾರ್ಧದಲ್ಲಿ ಕೇವಲ ಶೇಕಡಾ 20 ರಷ್ಟು ಮಾತ್ರ ತೆಲುಗು ಸಿನಿಮಾದ ಪ್ರಭಾವ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ರಿಮೇಕ್ ನಿರ್ಧಾರದ ಹಿಂದಿನ ಕಥೆಯನ್ನು ಹಂಚಿಕೊಂಡ ನಿರ್ದೇಶಕರು, ಆರಂಭದಲ್ಲಿ ನಾನು ವಿಜಯ್ ಅವರಿಗೆ ಸಂಪೂರ್ಣವಾಗಿ ಬೇರೆಯದೇ ಆದ ಒಂದು ಸಾಹಸಮಯ ಕಥೆಯನ್ನು ಹೇಳಿದ್ದೆ. ಅದು ಇಬ್ಬರು ಬುದ್ಧಿವಂತರ ನಡುವಿನ ತೀವ್ರ ಪೈಪೋಟಿಯ ಕಥೆಯಾಗಿತ್ತು. ಆದರೆ ಆ ಕಥೆ ತೀರಾ ಗಂಭೀರವಾಗಿದೆ ಎಂದು ಭಾವಿಸಿದ ವಿಜಯ್, ಭಗವಂತ್ ಕೇಸರಿ ಸಿನಿಮಾವನ್ನು ರಿಮೇಕ್ ಮಾಡಲು ಸೂಚಿಸಿದರು. ಆ ಚಿತ್ರದಲ್ಲಿನ ಪ್ರತಿಯೊಂದು ದೃಶ್ಯವೂ ತಮಗೆ ಏಕೆ ಇಷ್ಟವಾಯಿತು ಎಂಬುದನ್ನು ವಿಜಯ್ ಹಂತ ಹಂತವಾಗಿ ವಿವರಿಸಿದ್ದರು. ವಿಜಯ್ ಅವರಿಗೆ ಮಹಿಳಾ ಸಬಲೀಕರಣದ ವಿಷಯಗಳು ಬಹಳ ಹತ್ತಿರವಾಗಿವೆ. ಹಿಂದೆ ಅಜಿತ್ ಕುಮಾರ್ ಅವರೊಂದಿಗೆ ಪಿಂಕ್ ಸಿನಿಮಾದ ರಿಮೇಕ್ ಮಾಡುವಾಗಲೂ ನಾನು ಇದೇ ರೀತಿಯ ಆಸಕ್ತಿಯನ್ನು ಗಮನಿಸಿದ್ದೆ ಎಂದು ನೆನಪಿಸಿಕೊಂಡರು.
ಬಾಲಕೃಷ್ಣ ಅವರ ಶೈಲಿ ಮತ್ತು ವಿಜಯ್ ಅವರ ಮಾಸ್ ಇಮೇಜ್ ಸಂಪೂರ್ಣ ಭಿನ್ನವಾಗಿವೆ. ಆದರೂ ಇದು ದಳಪತಿ ವಿಜಯ್ ಅವರ ಕೊನೆಯ ಸಿನಿಮಾವಾಗಿದ್ದರಿಂದ ಈ ಅವಕಾಶವನ್ನು ಕೈಚೆಲ್ಲಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಅವರ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಕಥೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದೇನೆ ಎಂದು ಹೆಚ್ ವಿನೋತ್ ಹೇಳಿದ್ದಾರೆ.

