ದಾರ್ಜಿಲಿಂಗ್ನ ಕುರ್ಸಿಯಾಂಗ್ ಪ್ರದೇಶದಲ್ಲಿ ಮಳೆಯ ನಡುವೆಯೇ ಪರ್ವತ ರಸ್ತೆಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಯುವಕ ಕೂದಲೆಳೆಯ ಅಂತರದಲ್ಲಿ ಭೀಕರ ಅಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಇಬ್ಬರು ಬೈಕ್ ಸವಾರರು ಮಳೆಯಿಂದ ಜಾರುವಂತಾಗಿದ್ದ ತಿರುವು-ಮುರುವುಗಳಿರುವ ರಸ್ತೆಯಲ್ಲಿ ಸಾಗುತ್ತಿರುವುದು ಕಾಣಿಸುತ್ತದೆ. ಮುಂಚೆ ಸಾಗುತ್ತಿದ್ದ ಬೈಕ್ ಏಕಾಏಕಿ ನಿಯಂತ್ರಣ ತಪ್ಪಿ ಜಾರಿ ರಸ್ತೆ ಬದಿಯ ಕಂದಕದತ್ತ ಸಾಗುತ್ತದೆ. ಆದರೆ ಕ್ಷಣಾರ್ಧದಲ್ಲೇ ಚಾಕಚಕ್ಯತೆ ಪ್ರದರ್ಶಿಸಿದ ಸವಾರ, ಕೊನೆಯ ಕ್ಷಣದಲ್ಲಿ ಬೈಕ್ ಅನ್ನು ಕಂದಕದ ಅಂಚಿನಿಂದ ತಿರುಗಿಸಿ ದೊಡ್ಡ ದುರಂತವನ್ನು ತಪ್ಪಿಸಿಕೊಳ್ಳುತ್ತಾನೆ.
ಇನ್ಸ್ಟಾಗ್ರಾಂನಲ್ಲಿ ‘Arsu’ ಎಂಬ ಬಳಕೆದಾರ “Safe drive, safe life” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.ವಿಡಿಯೋದ ಆರಂಭದಲ್ಲಿ ಅರ್ಸು ತಮ್ಮ ಮುಂದೆ ಸಾಗುತ್ತಿದ್ದ ರಸ್ತೆಯನ್ನು ಚಿತ್ರೀಕರಿಸುತ್ತಾ ಬೈಕ್ ಓಡಿಸುತ್ತಿರುವುದು ಕಾಣಿಸುತ್ತದೆ. ಅವರಿಗಿಂತ ಸ್ವಲ್ಪ ಮುಂದೆ ಬಪ್ಪಿ ಬರ್ಮನ್ ಎಂಬ ಮತ್ತೊಬ್ಬ ಸವಾರ ಬೈಕ್ ಚಲಾಯಿಸುತ್ತಿರುತ್ತಾರೆ. ಆರಂಭದಲ್ಲಿ ಇಬ್ಬರೂ ಮಳೆಯಿಂದ ಜಾರುವ ರಸ್ತೆಯಲ್ಲೂ ಎಚ್ಚರಿಕೆಯಿಂದ ಸಾಗುತ್ತಿರುವಂತೆ ಕಂಡರೂ, ಕೆಲವೇ ಕ್ಷಣಗಳಲ್ಲಿ ಬಪ್ಪಿ ಬರ್ಮನ್ ಅವರ ಬೈಕ್ ಹಿಡಿತ ತಪ್ಪಿ ನಿಯಂತ್ರಣ ಕಳೆದುಕೊಳ್ಳುತ್ತದೆ.
ಬೈಕ್ ನೇರವಾಗಿ ಕಂದಕದತ್ತ ಜಾರಲಾರಂಭಿಸುತ್ತದೆ. ಆದರೆ ಅಪಾರ ಧೈರ್ಯ ಮತ್ತು ತಕ್ಷಣದ ಚಾಕಚಕ್ಯತೆಯಿಂದ ಬಪ್ಪಿ ಬರ್ಮನ್ ಕೊನೆಯ ಕ್ಷಣದಲ್ಲಿ ಬೈಕ್ ಅನ್ನು ನಿಯಂತ್ರಿಸಿ ಅಪಾಯದಿಂದ ಪಾರಾಗುತ್ತಾರೆ. ಸುರಕ್ಷಿತ ಸ್ಥಳಕ್ಕೆ ತಲುಪಿದ ಕೂಡಲೇ ಆತಂಕಗೊಂಡ ಅವರು ಬೈಕ್ನಿಂದ ಇಳಿದು ರಸ್ತೆ ಬದಿಯಲ್ಲಿ ಕುಳಿತು ಉಸಿರಾಟ ಸಮತೋಲನಗೊಳಿಸುತ್ತಾರೆ. ಈ ವೇಳೆ ಅವರ ಜೊತೆಯಲ್ಲಿದ್ದ ಅರ್ಸು ಕೂಡಲೇ ಓಡಿಬಂದು ನೆರವಾಗುತ್ತಾರೆ.

