ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯ ಝೋಜಿಲಾ ಪಾಸ್ ಬಳಿಯ ಝೀರೋ ಪಾಯಿಂಟ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಹಲವಾರು ವಾಹನಗಳು ಹೂತು ಹೋಗಿದ್ದು, 10 ವರ್ಷದ ಮಗು ಸೇರಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಸ್ತೆಯ ಮೇಲೆ ಬಿದ್ದಿರುವ ಹಿಮ ಮತ್ತು ಇತರ ಅವಶೇಷಗಳನ್ನು ತೆರವುಗೊಳಿಸಿದ ನಂತರ 434 ಕಿ.ಮೀ ದೂರದ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅನುಮತಿಸಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ, ಸಿಆರ್‌ಪಿಎಫ್, ಲಡಾಖ್ ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು ಸ್ಥಳೀತ ಆಡಳಿತವು ಹಿಮ ತೆರವು ಕಾರ್ಯಾಚರಣೆಯಲ್ಲಿ ಚುರುಕುಗೊಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಶ್ರೀನಗರ ಮತ್ತು ಲಡಾಖ್ನ ಲೇಹ್ ನಗರವನ್ನು ಸಂಪರ್ಕಿಸುವ ದ್ವಿಪಥ ರಸ್ತೆಯ ಹೆದ್ದಾರಿ ಇದಾಗಿದ್ದು, ಈ ಮಾರ್ಗದಲ್ಲಿ ಹಿಮಪಾತ ಸಂಭವಿಸಿದೆ. ಇದು 11,575 ಅಡಿ ಎತ್ತರದ ಝೋಜಿಲಾ ಪಾಸ್ ಮೂಲಕ ಹಾದುಹೋಗುತ್ತದೆ. ಅಲ್ಲಿ ಸುರಂಗವನ್ನು ನಿರ್ಮಿಸಲಾಗುತ್ತಿದೆ.
ಹಿಮಪಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರಿ ಹಿಮಪಾತ ಸಂಭವಿಸಿರುವುದರಿಂದ ಝೋಜಿಲಾ ಪಾಸ್ ಮೂಲಕ ಕಾಶ್ಮೀರ ಮತ್ತು ಲಡಾಖ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್ ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಸರ್ವಋತು ರಾಷ್ಟ್ರೀಯ ಹೆದ್ದಾರಿಯ ಮೇಲೆ ಭಾರೀ ಹಿಮ ಬಿದ್ದಿದೆ. ಮುಂಜಾಗೃತಾ ಕ್ರಮವಾಗಿ ಅಪಾಯವನ್ನು ತಪ್ಪಿಸಲು ರಸ್ತೆಯನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

