HomeKarnatakaಜಲ ಜೀವನ್ ಮಿಷನ್ ಕಳಪೆ ಕಾಮಗಾರಿ ಸಂಸದರು ಗರಂ!

ಜಲ ಜೀವನ್ ಮಿಷನ್ ಕಳಪೆ ಕಾಮಗಾರಿ ಸಂಸದರು ಗರಂ!

“ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಇರುವುದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅಡಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಸದ್ಬಳಕೆ ಮಾಡಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು” ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

ಶನಿವಾರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸಂಸದರು ಮಾತನಾಡಿದರು.

ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕುಡಿಯುವ ನೀರಿನ ಕಾಮಗಾರಿಗಳು ಅತ್ಯಂತ ಕಳಪೆಯಾಗಿರುವ ಬಗ್ಗೆ ಸಂಸದರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲಾ ಪಂಚಾಯತ್ ಸಿಇಓ ಡಾ. ಆಕಾಶ್ ಮಾತನಾಡಿ, “ಜಿಲ್ಲೆಯ ಒಟ್ಟು 1,500 ಜೆಜೆಎಂ ಕಾಮಗಾರಿಗಳ ಪೈಕಿ ಶೇ. 30ರಷ್ಟು ಅಂದರೆ ಸುಮಾರು 500 ಕಾಮಗಾರಿಗಳನ್ನು ತಾಲೂಕು ಮಟ್ಟದ ತಾಂತ್ರಿಕ ತಂಡದಿಂದ ತಪಾಸಣೆ ನಡೆಸಲಾಗಿದೆ. ವರದಿಯಲ್ಲಿ 160 ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿವೆ. ರಸ್ತೆ ಮರುನಿರ್ಮಾಣ, ಪೈಪ್‍ಗಳ ಗುಣಮಟ್ಟ ಮತ್ತು ನೀರಿನ ಒತ್ತಡದ ನಿರ್ವಹಣೆಯಲ್ಲಿ ಲೋಪಗಳು ಕಂಡುಬಂದಿವೆ ಎಂಬುದಾಗಿ ವರದಿ ಸಲ್ಲಿಕೆಯಾಗಿದೆ” ಎಂದರು.

ಕಳಪೆ ಕಾಮಗಾರಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದರು, “ಕೇಂದ್ರ ಸರ್ಕಾರ ಯೋಜನೆಯಡಿ ಜಿಲ್ಲೆಗೆ ಎರಡು ಸಾವಿರಾರು ಕೋಟಿ ಅನುದಾನದ ನೀಡಿದೆ. ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರ ಹಣ ಪೋಲಾಗುವುದನ್ನು ಸಹಿಸಲು ಆಗುವುದಿಲ್ಲ. ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ನೀಡಬೇಕಿದ್ದ ಬಿಲ್ ಪಾವತಿಯನ್ನು ತಕ್ಷಣವೇ ತಡೆ ಹಿಡಿಯಬೇಕು” ಎಂದು ಸೂಚಿಸಿದರು.

“ಕಾಮಗಾರಿಗಳು ಪೂರ್ಣಗೊಂಡು, ಗುಣಮಟ್ಟದ ಪ್ರಮಾಣಪತ್ರ ದೊರೆಯುವವರೆಗೆ ಕೇಂದ್ರ ಸರ್ಕಾರ ಬಾಕಿ ಇರುವ ರೂ. 450 ಕೋಟಿ ಅನುದಾನ ನೀಡುವುದಿಲ್ಲ. ಇದರಿಂದ ಯೋಜನೆಗೆ ಅನುದಾನ ಕೊರತೆ ಉಂಟಾಗುತ್ತದೆ. ಕೂಡಲೇ ಲೋಪದೋಷ ಸರಿಪಡಿಸುವಂತೆ” ಅಧಿಕಾರಿಗಳಿಗೆ ಸೂಚಿಸಿದರು.

“ಜಲ ಜೀವನ್ ಮಿಷನ್ ಕಾಮಗಾರಿಗಳ ಬಗ್ಗೆ ಸಾಮಾನ್ಯ ವರದಿಯನ್ನು ಮಾತ್ರ ಪಡೆಯಲಾಗಿದೆ. ಇನ್ನು 15 ದಿನಗಳಲ್ಲಿ ಪೈಪ್ ಗುಣಮಟ್ಟ ಮತ್ತು ನೀರು ಪರೀಕ್ಷೆಯ ತಾಂತ್ರಿಕ ವರದಿ ಪಡೆಯಲಾಗುವುದು. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಸಿಇಓ ಡಾ.ಆಕಾಶ್ ತಿಳಿಸಿದರು.

ಜಿಲ್ಲೆಯಾದ್ಯಂತ 1026 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 765 ಘಟಕಗಳು ಸುಸ್ಥಿಯಲ್ಲಿವೆ. ಉಳಿದ 261 ಘಟಕಗಳಲ್ಲಿ 121 ದುರಸ್ತಿ ಮಾಡಿ ಸಂಬಂದ ಗ್ರಾಮ ಪಂಚಾಯಿತಿ ಹಸ್ತಾಂತರ ಮಾಡಲಾಗುವುದು. 140 ಘಟಕಗಳು ಸಂಪೂರ್ಣ ಹಾಳಾಗಿದ್ದು, ಕಾರ್ಯಚರಣೆ ನಿಲ್ಲಿಸಿವೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು.

“140 ಘಟಕಗಳ ದುರಸ್ತಿ ಸಾಧ್ಯತೆಯನ್ನು ಪರಿಶೀಲಿಸಿ, ಬೇಸಿಗೆ ಆರಂಭವಾಗುವ ಮುನ್ನವೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು” ಎಂದು ಸಂಸದರು ಗಡುವು ನೀಡಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular