ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅತ್ಯಂತ ನಿರೀಕ್ಷಿತ ‘ಜೈಲರ್ 2’ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಅಕ್ಟೋಬರ್ 15, 2026 ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿರುವ ಈ ಸೀಕ್ವೆಲ್ ಚಿತ್ರದ ನಾಲ್ಕನೇ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
ಇಂದು ಸಂಜೆ 6 ಗಂಟೆಗೆ ಈ ಹೊಸ ಹಾಡು ಅನಾವರಣಗೊಳ್ಳಲಿದ್ದು, ಬಾಲಿವುಡ್‌ನ ಗ್ಲಾಮರಸ್ ತಾರೆ ನೋರಾ ಫತೇಹಿ ಅವರ ಭರ್ಜರಿ ಡ್ಯಾನ್ಸ್ ಈ ಹಾಡಿನ ಪ್ರಮುಖ ಆಕರ್ಷಣೆಯಾಗಲಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಟ್ರ್ಯಾಕ್ ಹೈ-ಎನರ್ಜಿ ಡ್ಯಾನ್ಸ್ ನಂಬರ್ ಆಗಿರಲಿದ್ದು, ಅಭಿಮಾನಿಗಳನ್ನು ಕುಣಿಸುವುದು ಖಚಿತ ಎನ್ನಲಾಗಿದೆ.
ವಿಶೇಷವೆಂದರೆ, ಚಿತ್ರತಂಡವು ಈ ಹಾಡಿನ ಶೀರ್ಷಿಕೆಯನ್ನು ಗೌಪ್ಯವಾಗಿಟ್ಟಿದ್ದು, ಸಂಜೆ ಹಾಡಿನ ಜೊತೆಯಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದೆ. ಜೊತೆಗೆ ಹಾಡಿನಲ್ಲಿ ನೋರಾ ಜೊತೆ ಮತ್ತಾರು ಹೆಜ್ಜೆ ಹಾಕಿದ್ದಾರೆ ಎಂಬ ವಿವರಗಳನ್ನು ಸರ್ಪ್ರೈಸ್ ಆಗಿ ಕಾಯ್ದಿರಿಸಲಾಗಿದೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಹಾಗೂ ಸನ್ ಪಿಕ್ಚರ್ಸ್ ನಿರ್ಮಾಣದ ‘ಜೈಲರ್ 2’ ಸಿನಿಮಾ ಈಗಾಗಲೇ ಚಿತ್ರಪೂರ್ವ ವ್ಯಾಪಾರದಲ್ಲೂ ಬೃಹತ್ ಗಳಿಕೆ ಕಾಣುತ್ತಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ವಿದ್ಯಾ ಬಾಲನ್, ಸೂರಜ್ ವೆಂಜಾರಮೂಡು, ಮಿರ್ನಾ ಮೆನನ್, ರಮ್ಯಾ ಕೃಷ್ಣನ್, ಮಿಥುನ್ ಚಕ್ರವರ್ತಿ, ಎಸ್.ಜೆ. ಸೂರ್ಯ ಹಾಗೂ ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

