ಬೆಳಗಾವಿ: ವಿಡಿಯೋ ಕಾಲ್ ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಅಳಿಯ ಚಾಕುವಿನಿಂದ ಇರಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟೆಯಲ್ಲಿ ನಡೆದಿದೆ.
ಮಹಾದೇವಿ(45) ಅವರಿಗೆ ಅಳಿಯ ಅರವಿಂದ ಗವಳಿ ಚಾಕುವಿನಿಂದ ಇರಿದಿದ್ದಾನೆ. ಎರಡು ತಿಂಗಳ ಹಿಂದೆ ಅರವಿಂದ ಗವಳಿ ಪತ್ನಿಗೆ ಹೆರಿಗೆಯಾಗಿತ್ತು. ಪದೇ ಪದೇ ವಿಡಿಯೋ ಕಾಲ್ ಮಾಡಿ ಮಗು ತೋರಿಸುವಂತೆ ಪಟ್ಟು ಹಿಡಿಯುತ್ತಿದ್ದ. ಕೆಲಸ ಬಿಟ್ಟು ಮೊಬೈಲ್ ಹಿಡಿದುಕೊಂಡು ಕೂರುವುದಕ್ಕೆ ಆಗುವುದಿಲ್ಲ ಎಂದು ಅತ್ತೆ ಹೇಳಿದ್ದರು. ಒಂದು ಬಾರಿ ಮಾತ್ರ ವಿಡಿಯೋ ಕಾಲ್ ಮಾಡುವಂತೆ ತಿಳಿಸಿದ್ದರು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಅಳಿಯ ಅರವಿಂದ ಅತ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ. ನನ್ನ ಮನೆ ಬಾಗಿಲಿಗೆ ಬಂದರೆ ನಿನ್ನನ್ನು ಬಿಡಲ್ಲ ಎಂದು ಮಹಾದೇವಿ ಬೈದಾಡಿದ್ದರು. ಇದರಿಂದ ಆಕ್ರೋಶಗೊಂಡು ಮನೆಗೆ ಬಂದ ಅಳಿಯ ಅರವಿಂದ ಗವಳಿ ಅತ್ತೆ ಮಹಾದೇವಿಗೆ ಚಾಕುವಿನಿಂದ ಇರಿದಿದ್ದಾನೆ. ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಮಹಾದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತ್ತೆಗೆ ಚಾಕುವಿನಿಂದ ಇರಿದು, ಇಂದು ಜೈಲ್, ನಾಳೆ ಬೇಲ್ ನಿನ್ನನ್ನು ಬಿಡಲ್ಲ ಎಂದು ಸ್ಟೇಟಸ್ ಹಾಕಿಕೊಂಡಿದ್ದ. ಆರೋಪಿ ಅರವಿಂದನನ್ನು ಬಂಧಿಸಿದ ಮುರಗೋಡ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

