ಅಹಮದಾಬಾದ್: ಕೆಲವೇ ದಿನಗಳ ಹಿಂದೆ ಮಳೆಯ ಕೊರತೆಯಿಂದ ತೀವ್ರ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ದೇಶದ ಜನರಿಗೆ ಮಳೆ ತಂಪು ನೀಡುತ್ತಿದ್ದರೆ, ಗುಜರಾತ್ನಲ್ಲಿ ಮಾತ್ರ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ದಾಖಲೆ ಮಟ್ಟದ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಲ್ಸಾಡ್ ಜಿಲ್ಲೆಯ ಉಮರ್ಗಾಂವ್ ತಾಲ್ಲೂಕಿನಲ್ಲಿ ಕೇವಲ 16 ಗಂಟೆಗಳಲ್ಲಿ 1,100 ಮಿಲಿಮೀಟರ್ ಮಳೆಯಾಗಿದೆ. ಇತರ ಹಲವು ತಾಲ್ಲೂಕುಗಳಲ್ಲಿಯೂ 600 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಸುರತ್, ನವಸಾರಿ, ಡಾಂಗ್ಸ್ ಹಾಗೂ ತಾಪಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಇಂದು ಕೂಡ ರೆಡ್ ಅಲರ್ಟ್ ಘೋಷಿಸಿದೆ. ವಾಪಿ ಸುತ್ತಮುತ್ತ 200ಕ್ಕೂ ಹೆಚ್ಚು ಕಾರುಗಳು ಹಾಗೂ ಸಾವಿರಾರು ಮನೆಗಳು ನೀರಿನಲ್ಲಿ ಮುಳುಗಿದ್ದು, ಸ್ಥಳೀಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹವಾಮಾನ ಇಲಾಖೆಯ ಇತ್ತೀಚಿನ ವರದಿ ಪ್ರಕಾರ, ರಾಜಧಾನಿ ಅಹಮದಾಬಾದ್ ಸೇರಿದಂತೆ ಗಾಂಧಿನಗರ, ಖೇಡಾ, ಆನಂದ್, ವಡೋದರಾ, ಭರೂಚ್, ಸಬರ್ಕಾಂಠಾ, ಮಹೆಸಾಣಾ, ಪಾಟಣ್, ಜಾಮ್ನಗರ, ದ್ವಾರಕಾ, ರಾಜ್ಕೋಟ್, ಪೋರಬಂದರ್, ಜುನಾಗಢ, ಭಾವನಗರ ಹಾಗೂ ಅಮರೇಲಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ವಿಶೇಷವಾಗಿ ಅಹಮದಾಬಾದ್ನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದ್ದು, ಗಂಟೆಗೆ 61 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಪತ್ತು ನಿರ್ವಹಣಾ ಇಲಾಖೆಯನ್ನು ಎಚ್ಚರ ಸ್ಥಿತಿಯಲ್ಲಿ ಇರಿಸಿದ್ದು, ತುರ್ತು ಅಗತ್ಯವಿಲ್ಲದಿದ್ದರೆ ಮನೆಗಳಿಂದ ಹೊರಬರಬೇಡಿ ಎಂದು ಸಾರ್ವಜನಿಕರಿಗೆ ಸೂಚಿಸಿದೆ.
ರಾಜ್ಯದ ಸುಮಾರು 250 ತಾಲ್ಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಸುಮಾರು 19.96 ಇಂಚುಗಳಷ್ಟು ಮಳೆ ದಾಖಲಾಗಿದೆ. ಅಹಮದಾಬಾದ್ನಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಸ್ನಾ ಬ್ಯಾರೇಜ್ನಿಂದ ಸಬರ್ಮತಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ಮಧ್ಯರಾತ್ರಿಯ ಬಳಿಕ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದರಿಂದ ವಾಹನ ಸಂಚಾರಕ್ಕಾಗಿ ನಗರದ ಎಲ್ಲಾ ಅಂಡರ್ಪಾಸ್ಗಳನ್ನು ಮತ್ತೆ ತೆರೆಯಲಾಗಿದೆ. ಆದರೆ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ನದಿಗಳು, ಅಣೆಕಟ್ಟುಗಳು ಹಾಗೂ ಜಲಾಶಯಗಳ ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿದೆ. ಪರಿಣಾಮ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಅಪಾರ್ಟ್ಮೆಂಟ್ಗಳ ಬಳಿ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಮುಳುಗಿವೆ. ವಸತಿ ಪ್ರದೇಶಗಳಲ್ಲೂ ಪ್ರವಾಹದ ನೀರು ಕೆರೆಯಂತೆ ಆವರಿಸಿಕೊಂಡಿದ್ದು, ನೀರಿನ ಹರಿವು ತೀವ್ರವಾಗಿದೆ.

