ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನಲಾದ ‘ಜನಾ ನಾಯಗನ್’ ಚಿತ್ರದಿಂದ ತಮ್ಮ ದೃಶ್ಯವನ್ನು ತೆಗೆದುಹಾಕಿದ್ದಕ್ಕೆ ತಮಿಳು ನಟಿ ಆನಂದಿ ಅಜಯ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ವೀಡಿಯೋ ಹಂಚಿಕೊಂಡಿರುವ ಅವರು ಕಣ್ಣೀರು ಹಾಕುತ್ತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸುಮಾರು ಒಂದು ವರ್ಷದಿಂದ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾಗಿ ಹೇಳಿರುವ ಆನಂದಿ, ವಿಜಯ್ ಅವರೊಂದಿಗೆ ತೆರೆಹಂಚಿಕೊಳ್ಳುವ ಆಸೆ ಇತ್ತು ಎಂದಿದ್ದಾರೆ. ಆದರೆ ಅಂತಿಮವಾಗಿ ತಮ್ಮ ದೃಶ್ಯವನ್ನು ಕತ್ತರಿಸಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ. ಇದು ವಿಜಯ್ ಅವರ ಕೊನೆಯ ಚಿತ್ರವಾಗಿರುವುದರಿಂದ ಮತ್ತೊಮ್ಮೆ ಅವರೊಂದಿಗೆ ನಟಿಸುವ ಅವಕಾಶ ಸಿಗುವುದಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಅನೇಕ ಅಭಿಮಾನಿಗಳು ಹಾಗೂ ನೆಟ್ಟಿಗರು ನಟಿಗೆ ಧೈರ್ಯ ತುಂಬಿದ್ದಾರೆ. ನಿರಾಸೆಗೊಳ್ಳಬೇಡಿ, ನಿಮ್ಮ ಪ್ರತಿಭೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ದೊಡ್ಡ ಅವಕಾಶಗಳು ಹುಡುಕಿಕೊಂಡು ಬರಲಿವೆ ಎಂದು ಕಾಮೆಂಟ್ ಮಾಡುವ ಮೂಲಕ ಸಾಂತ್ವನ ಹೇಳಿದ್ದಾರೆ.
ಯಾರು ಈ ಆನಂದಿ ಅಜಯ್? ಆನಂದಿ ಅಜಯ್ ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿದ್ದು, ಕಾರ್ತಿಗೈ ಪೆಂಗಳ್, ಯಮುನಾ ಮತ್ತು ಕನಾ ಕಾಣುಮ್ ಕಾಲಂಗಳ್ ನಂತಹ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ವೃತ್ತಿಪರ ಶಾಸ್ತ್ರೀಯ ನರ್ತಕಿಯಾಗಿರುವ ಇವರು ಹಲವಾರು ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಎಚ್ ವಿನೋತ್ ನಿರ್ದೇಶನದಲ್ಲಿ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೂಡಿಬಂದಿರುವ ಜನಾ ನಾಯಗನ್ ಸಿನಿಮಾ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಮೊದಲ ದಿನ ಜಾಗತಿಕವಾಗಿ ೭೮.೨೭ ಕೋಟಿ ರೂಪಾಯಿ ಗಳಿಕೆ ಕಂಡಿದೆ. ಭಾರತದಲ್ಲೇ ೪೧ ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದು, ತಮಿಳು ಆವೃತ್ತಿಯಿಂದಲೇ ಹೆಚ್ಚಿನ ಆದಾಯ ಬಂದಿದೆ.

