ನೀವು ಯಾವುದಾದರೂ ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸಿದಾಗ ಕ್ಯೂಆರ್ ಕೋಡ್ (QR Code) ಬಳಸಿ ಆನ್‌ಲೈನ್ ಪಾವತಿ ಮಾಡುತ್ತೀರಾ? ಎಚ್ಚರ, ಅದು ನಕಲಿ ಕ್ಯೂಆರ್ ಕೋಡ್ ಇರಬಹುದು. ನೀವು ಅಂಗಡಿಗಳಲ್ಲಿ ಆತುರಾತುರವಾಗಿ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಹಣ ಪಾವತಿಸುತ್ತಿದ್ದೀರಾ? ಹಾಗಿದ್ದರೆ ಸ್ವಲ್ಪ ನಿಲ್ಲಿ ! ವಂಚಕರು ಈಗ ಅಸಲಿ ಕೋಡ್‌ಗಳ ಮೇಲೆ ತಮ್ಮದೇ ಆದ ನಕಲಿ ಕ್ಯೂಆರ್ ಕೋಡ್ ಸ್ಟಿಕ್ಕರ್ ಅಂಟಿಸಿ ಹಣ ಲೂಟಿ ಮಾಡುತ್ತಿದ್ದಾರೆ. ನೀವು ಪಾವತಿಸುವ ಹಣ ಅಂಗಡಿಯವನಿಗೆ ಹೋಗುವ ಬದಲು ನೇರವಾಗಿ ವಂಚಕರ ಜೇಬಿಗೆ ಸೇರುತ್ತಿದೆ. . ಡಿಜಿಟಲ್ ಪಾವತಿಯ ಈ ಕಾಲದಲ್ಲಿ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಇಲ್ಲಿದೆ ಸಂಪೂರ್ಣ ಮಾಹಿತಿ.
ಸಣ್ಣ ಚಾಕೊಲೇಟ್‌ನಿಂದ ಹಿಡಿದು ಪೆಟ್ರೋಲ್ ಬಂಕ್‌ವರೆಗೆ ಎಲ್ಲೆಡೆ ಡಿಜಿಟಲ್ ಪಾವತಿ ನಡೆಯುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ನಕಲಿ ಕ್ಯೂಆರ್ ಕೋಡ್‌ಗಳ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸುತ್ತಿದ್ದಾರೆ.
ಕೋಡ್ ಮೇಲೆ ಕೋಡ್: ಅಸಲಿ ಕ್ಯೂಆರ್ ಕೋಡ್‌ನ ಮೇಲೆ ನಕಲಿ ಕೋಡ್‌ನ ಸ್ಟಿಕ್ಕರ್ ಹಚ್ಚಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ನೀವು ಪಾವತಿಸುವ ಹಣ ಅಂಗಡಿಯವನಿಗೆ ಹೋಗುವ ಬದಲು ವಂಚಕನ ಖಾತೆಗೆ ಸೇರುತ್ತದೆ.
ಹೆಸರನ್ನು ಪರಿಶೀಲಿಸಿ: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಮೊಬೈಲ್ ಪರದೆಯ ಮೇಲೆ ಬರುವ ಹೆಸರನ್ನು ಗಮನಿಸಿ. ಅದು ಆ ಅಂಗಡಿಯ ಹೆಸರೇ ಆಗಿದೆಯೇ ಅಥವಾ ಬೇರೆ ವ್ಯಕ್ತಿಯ ಹೆಸರೇ ಎಂದು ಖಚಿತಪಡಿಸಿಕೊಳ್ಳಿ. ಹೆಸರಿನಲ್ಲಿ ವ್ಯತ್ಯಾಸವಿದ್ದರೆ ತಕ್ಷಣವೇ ಅಂಗಡಿಯವನಿಗೆ ತಿಳಿಸಿ.
ಉದ್ವೇಗ ಬೇಡ: ಹಣ ಪಾವತಿಸುವಾಗ ಅವಸರ ಮಾಡಬೇಡಿ. ಸ್ಕ್ಯಾನ್ ಮಾಡಿದ ತಕ್ಷಣ ‘Pay’ ಬಟನ್ ಒತ್ತಬೇಡಿ. ಎಲ್ಲಾ ವಿವರಗಳನ್ನು ಒಮ್ಮೆ ಓದಿ, ಖಚಿತಪಡಿಸಿಕೊಂಡ ನಂತರವೇ ಮುಂದುವರಿಯಿರಿ. ಈ ಪ್ರಕ್ರಿಯೆಗೆ ಕೇವಲ 1-2 ನಿಮಿಷ ಸಾಕು, ಆದರೆ ಇದು ನಿಮ್ಮ ಹಣವನ್ನು ಉಳಿಸುತ್ತದೆ.
ಅಸ್ಪಷ್ಟ ಕೋಡ್ : ಒಂದು ವೇಳೆ ಕ್ಯೂಆರ್ ಕೋಡ್ ಅಸ್ಪಷ್ಟವಾಗಿದ್ದರೆ, ಬಾಗಿದ್ದರೆ ಅಥವಾ ಹರಿದಿದ್ದರೆ ಅದನ್ನು ಸ್ಕ್ಯಾನ್ ಮಾಡಲು ಹೋಗಬೇಡಿ. ಅಂತಹ ಸಂದರ್ಭಗಳಲ್ಲಿ ಅಂಗಡಿಯ ಮಾಲೀಕರನ್ನು ವಿಚಾರಿಸಿ ನೇರವಾಗಿ ಅವರ ನಂಬರ್‌ಗೆ ಅಥವಾ ಸರಿಯಾದ ಕೋಡ್‌ಗೆ ಹಣ ಕಳುಹಿಸಿ.
ಸೌಂಡ್ ಬಾಕ್ಸ್ ಬಳಕೆ: ಅಂಗಡಿಯಲ್ಲಿ ‘ಪೇಟಿಎಂ’ ಅಥವಾ ಇತರ ಸೌಂಡ್ ಬಾಕ್ಸ್ ಇದ್ದರೆ, ಹಣ ತಲುಪಿದ ಬಗ್ಗೆ ಧ್ವನಿ ಬರುವವರೆಗೆ ಅಲ್ಲಿಯೇ ಇರಿ.
ಡಿಜಿಟಲ್ ಪಾವತಿಯ ಈ ಕಾಲದಲ್ಲಿ ಕ್ಯೂಆರ್ ಕೋಡ್ ವಂಚನೆಗಳು ಹೆಚ್ಚುತ್ತಿವೆ. ಪಾವತಿ ಮಾಡುವ ಮುನ್ನ ಹೆಸರು ಮತ್ತು ಕೋಡ್‌ನ ಸ್ಥಿತಿಯನ್ನು ಪರಿಶೀಲಿಸುವುದು ಅತ್ಯಗತ್ಯ. ನಿಮ್ಮ ಜಾಗರೂಕತೆ ನಿಮ್ಮನ್ನು ಮತ್ತು ವ್ಯಾಪಾರಿಗಳನ್ನು ಇಬ್ಬರನ್ನೂ ವಂಚನೆಯಿಂದ ಕಾಪಾಡುತ್ತದೆ.

