2026ರ ಬಣ್ಣಗಳ ಹಬ್ಬ ಹೋಳಿ ಆಚರಣೆಯಲ್ಲಿ ಈ ಬಾರಿ ದೊಡ್ಡ ವ್ಯತ್ಯಾಸ ಕಂಡುಬಂದಿದೆ. ಸಾಮಾನ್ಯವಾಗಿ ಕಾಮನ ದಹನದ ಮರುದಿನವೇ ಬಣ್ಣಗಳ ಹಬ್ಬ ನಡೆಯುತ್ತದೆ. ಆದರೆ ಈ ಬಾರಿ ಚಂದ್ರಗ್ರಹಣದ ನೆರಳು ಹಬ್ಬದ ಮೇಲೆ ಬಿದ್ದಿರುವುದರಿಂದ, ಕಾಶಿ ವಿದ್ವತ್ ಪರಿಷತ್ತಿನ ವಿದ್ವಾಂಸರು ಹಬ್ಬದ ದಿನಾಂಕಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ. ಮಾರ್ಚ್ 2ರಂದು ರಾತ್ರಿ ಕಾಮನ ದಹನ ನಡೆದರೆ, ಬಣ್ಣಗಳ ಸಂಭ್ರಮಕ್ಕೆ ಮಾರ್ಚ್ 4ರವರೆಗೆ ಕಾಯಲೇಬೇಕು! ಈ ವಿಶಿಷ್ಟ ಖಗೋಳ ಲೆಕ್ಕಾಚಾರ ಮತ್ತು ಶಾಸ್ತ್ರೋಕ್ತ ಮುಹೂರ್ತದ ಸಂಪೂರ್ಣ ವಿವರ ಇಲ್ಲಿದೆ.
2026ರ ಹೋಳಿ ಹಬ್ಬ ಮತ್ತು ಹೋಲಿಕಾ ದಹನದ (ಕಾಮನ ದಹನ) ದಿನಾಂಕಗಳ ಬಗ್ಗೆ ಇದ್ದ ಗೊಂದಲಕ್ಕೆ ಕಾಶಿ ವಿದ್ವತ್ ಪರಿಷತ್ತು ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಜ್ಯೋತಿಷ್ಯ ಶಾಸ್ತ್ರಜ್ಞರು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಈ ಬಾರಿ ವಿಶೇಷ ಖಗೋಳ ವಿದ್ಯಮಾನಗಳಿಂದಾಗಿ ಹೋಲಿಕಾ ದಹನ ಮತ್ತು ಬಣ್ಣದ ಹೋಳಿಯ ನಡುವೆ 24 ಗಂಟೆಗಳಿಗೂ ಹೆಚ್ಚಿನ ಅಂತರ ಇರಲಿದೆ.
ಪ್ರಮುಖ ದಿನಾಂಕ ಮತ್ತು ಮುಹೂರ್ತ:
- ಹೋಲಿಕಾ ದಹನ (ಕಾಮನ ದಹನ): ಮಾರ್ಚ್ 2, 2026 (ಸೋಮವಾರ ರಾತ್ರಿ)
- ಹೋಳಿ (ಬಣ್ಣದ ಹಬ್ಬ): ಮಾರ್ಚ್ 4, 2026 (ಬುಧವಾರ)
ದಿನಾಂಕ ಬದಲಾವಣೆಗೆ ‘ಚಂದ್ರಗ್ರಹಣ’ವೇ ಕಾರಣ!
BHU ಜ್ಯೋತಿಷ್ಯ ವಿಭಾಗದ ಮುಖ್ಯಸ್ಥ ಪಂಡಿತ್ ವಿನಯ್ ಪಾಂಡೆ ಅವರ ಪ್ರಕಾರ, ಮಾರ್ಚ್ 3ರಂದು ಸಂಜೆ 5:49ಕ್ಕೆ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರಿಸುವುದರಿಂದ ಮಾರ್ಚ್ 3ರ ಬೆಳಗ್ಗೆ 9 ಗಂಟೆಯಿಂದಲೇ ‘ಸೂತಕ’ ಆರಂಭವಾಗಲಿದೆ. ಶಾಸ್ತ್ರಗಳ ಪ್ರಕಾರ ಸೂತಕದ ಸಮಯದಲ್ಲಿ ಹಬ್ಬದ ಆಚರಣೆ ನಿಷಿದ್ಧವಾಗಿರುವುದರಿಂದ, ಮಾರ್ಚ್ 3ರ ಬದಲಿಗೆ ಮಾರ್ಚ್ 4ರಂದು ದೇಶಾದ್ಯಂತ ಹೋಳಿ ಆಚರಿಸಲು ನಿರ್ಧರಿಸಲಾಗಿದೆ.
ಹೋಲಿಕಾ ದಹನಕ್ಕೆ ಸಕಾಲ ಯಾವುದು?
ಹೋಲಿಕಾ ದಹನಕ್ಕೆ ಪೂರ್ಣಿಮೆಯ ತಿಥಿ ಮತ್ತು ಭದ್ರಾ ಕಾಲದ ಮುಕ್ತಾಯ ಅವಶ್ಯಕ.
- ಮಾರ್ಚ್ 2 ರ ರಾತ್ರಿ ಭದ್ರಾ ಕಾಲವಿದ್ದರೂ, ಅದರ ‘ಬಾಲ’ (Puchh) ಭಾಗವು ಹಾನಿಕಾರಕವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.
- ಹೀಗಾಗಿ, ಮಾರ್ಚ್ 2ರ ತಡರಾತ್ರಿ 12:50 ರಿಂದ 2:32 ರವರೆಗೆ ಹೋಲಿಕಾ ದಹನಕ್ಕೆ ಅತ್ಯಂತ ಶುಭ ಮುಹೂರ್ತವಾಗಿದೆ.
ವಿವಿಧ ರಾಜ್ಯಗಳಲ್ಲಿ ಆಚರಣೆ:
- ಉತ್ತರ ಭಾರತ: ಇಲ್ಲಿ ಪ್ರಮುಖವಾಗಿ ಮಾರ್ಚ್ 4ರಂದು ಪ್ರತಿಪದ ತಿಥಿಯಲ್ಲಿ ಹೋಳಿ ಆಚರಿಸಲಾಗುತ್ತದೆ.
- ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ: ಇಲ್ಲಿ ಮಾರ್ಚ್ 4ರಿಂದ ಆರಂಭವಾಗಿ ‘ರಂಗ ಪಂಚಮಿ’ (ಮಾರ್ಚ್ 8) ವರೆಗೆ ಬಣ್ಣಗಳ ಸಂಭ್ರಮ ಮುಂದುವರಿಯಲಿದೆ.
- ಇತರ ಭಾಗಗಳಲ್ಲಿ: ಕೆಲವು ಕಡೆಗಳಲ್ಲಿ ‘ರಂಗಭರಿ ಏಕಾದಶಿ’ಯಿಂದಲೇ ಸಂಭ್ರಮ ಆರಂಭವಾಗಲಿದೆ.

