ದುಬೈ: ಇರಾನ್-ಇಸ್ರೇಲ್ ನಡುವೆ ಯುದ್ಧ ಆರಂಭವಾಗಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದೆ. ವಿಮಾನಹಾರಟಾಗಳಲ್ಲಿ ಭಾರಿ ವ್ಯತ್ಯವಾಗಿವೆ. ಮತ್ತೊಂದೆಡೆ ಭದ್ರತಾ ಆತಂಕ ಹೆಚ್ಚುತ್ತಿದೆ.
ವಿಮಾನ ಸಂಚಾರ ವ್ಯತ್ಯಯದಿಂದಾಗಿ ದುಬೈ, ಬಹ್ರೇನ್‌ನಲ್ಲಿ 90ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ. ಕುಟುಂಬಸ್ಥರು ಆತಂಕಗೊಂಡಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಮನವಿ ಮಾಡಿದ್ದಾರೆ.
ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಬಹ್ರೇನ್ ಮತ್ತು ದುಬೈ ನಗರಗಳು ಭದ್ರತಾ ಕ್ರಮಗಳು ಕಠಿಣಗೊಂಡಿದ್ದು, ವಿಮಾನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ವಿದೇಶ ಪ್ರವಾಸದಲ್ಲಿದ್ದ ಮತ್ತು ಉದ್ಯೋಗಕ್ಕಾಗಿ ತೆರಳಿದ್ದ ಕನ್ನಡಿಗರು ಅಲ್ಲಿಯೇ ಸಿಲುಕಿಕೊಂಡಿದ್ದು, ತಾಯ್ನಾಡಿಗೆ ಮರಳು ಸಾಧ್ಯವಾಗದೇ ಸಂಕಷ್ಟಕ್ಕೀಡಾಗಿದ್ದಾರೆ.
ಬಹ್ರೇನ್ ರಾಜಧಾನಿ ಮನಾಮಾ ನಗರದಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಗಡಿಹಳ್ಳಿ ಗ್ರಾಮದ ಪಂಜು, ಜಮುನ, ಸುರೇಂದ್ರ ಪ್ರಸಾದ್, ರತೀಶ್ ಹಾಗೂ ಮೈಸೂರು ಮೂಲದ ನೇತ್ರಾವತಿ ಸೇರಿದಂತೆ ಒಟ್ಟು ಆರು ಮಂದಿ ಕನ್ನಡಿಗರು ಸಿಲುಕಿದ್ದಾರೆ. ತಾವು ವಾಸಿಸುತ್ತಿರುವ ಕಟ್ಟಡದ ಪಕ್ಕದಲ್ಲೇ ಬಾಂಬ್ ಸ್ಫೋಟವಾಗುತ್ತಿರುವುದಾಗಿತಿಳಿಸಿದ್ದು, ಅವರ ಕುಟುಂಬಸ್ಥರು ತೀವ್ರ ಆತಂಕದಲ್ಲಿದ್ದಾರೆ. ತಮ್ಮವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ದುಬೈನಲ್ಲಿ ಕೂಡ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಪ್ರವಾಸದ ವೇಳೆ ಅಲ್ಲೇ ಸಿಲುಕಿಕೊಂಡಿದ್ದಾರೆ. ಅವರು ಉಳಿದಿದ್ದ ಹೋಟೆಲ್ ಸಮೀಪ ಮಿಸೈಲ್ ದಾಳಿ ನಡೆದಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಶಾಸಕ ಬಿ. ನಾಗೇಂದ್ರ ಅವರು ಮುಖ್ಯಮಂತ್ರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರೊಂದಿಗೆ ಮಾತನಾಡಿ ದುಬೈನಲ್ಲಿ ಸಿಲುಕಿರುವ ಜನರ ಕುರಿತು ಮಾಹಿತಿ ನೀಡಿದ್ದಾರೆ. ಮಾರ್ಚ್ 2ರವರೆಗೆ ವಿಮಾನ ಹಾರಾಟ ಇರುವುದಿಲ್ಲವೆಂದು ತಿಳಿಸಲಾಗಿದೆ.
ಇನ್ನು ಬಳ್ಳಾರಿಯಿಂದ ಫೆಬ್ರವರಿ 24ರಂದು ದುಬೈ ಪ್ರವಾಸಕ್ಕೆ ತೆರಳಿದ್ದ 35 ಮಂದಿ ಪ್ರವಾಸಿಗರು ವಾಪಸ್ಸಾಗಬೇಕಿದ್ದ ವೇಳೆಯಲ್ಲಿ ಯುದ್ಧ ಭೀತಿ ಹಿನ್ನೆಲೆಯಲ್ಲಿ ಅಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ ಒಟ್ಟು 50 ಮಂದಿ ಪ್ರವಾಸಿಗರು ವಿಮಾನ ರದ್ದಾದ ಕಾರಣ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಣಕಾಸಿನ ತೊಂದರೆಗೂ ಸಿಲುಕಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಗಿರೀಶ್ ಕೆರೂರು, ಫ್ರಾನ್ಸ್ ಮೂಲದ IDEMIA ಕಂಪನಿಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿದ್ದು, ದುಬೈ ಮಾರ್ಗವಾಗಿ ಪ್ಯಾರಿಸ್ ತೆರಳಬೇಕಾಗಿತ್ತು. ಆದರೆ ವಿಮಾನ ರದ್ದಾದ ಕಾರಣ ಅವರು ಅಬುಧಾಬಿಯ ಯಾಸ್ ಪ್ಲಾಜಾ ಹೋಟೆಲ್‌ನಲ್ಲಿ ತಂಗಿದ್ದಾರೆ.
ಭಾರತೀಯ ವಿದೇಶಾಂಗ ಇಲಾಖೆ ಸಹಾಯವಾಣಿ ಆರಂಭಿಸಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಕೂಡ ತಿಳಿಸಿದ್ದಾರೆ.

