ಇಸ್ರೇಲ್ ಮತ್ತು ಅಮೆರಿಕ ದಾಳಿ ಬಳಿಕ ಇರಾನ್ ಹಾರ್ಮುಜ್ ಜಲಸಂಧಿ ಬಂದ್ ಮಾಡಲಾಗಿದೆ. ಇದರಿಂದಾಗಿ ಭಾರತ ಸೇರಿ ವಿವಿಧ ದೇಶಗಳಲ್ಲಿ ತೈಲ ಕೊರತೆ ಎದುರಾಗುವ ಆತಂಕವಿತ್ತು. ಆದರೆ ಈ ಕುರಿತು ವೈರಲ್ ಆಗುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆ ಸಿಕ್ಕಿದೆ.
ಭಾರತ ಸರ್ಕಾರದ ಮೂಲಗಳ ಪ್ರಕಾರ, ದೇಶದ ಇಂಧನ ಭದ್ರತೆಯ ಸ್ಥಿತಿಗತಿಗಳು ತೃಪ್ತಿಕರವಾಗಿವೆ. ರಾಷ್ಟ್ರದಲ್ಲಿ ಸದ್ಯಕ್ಕೆ ಯಾವುದೇ ಇಂಧನ ಕೊರತೆ ಎದುರಾಗುವುದಿಲ್ಲ. ಜನರು ಆತಂಕ ಪಡುವ ಅಗತ್ಯವು ಇಲ್ಲ.
ಸ್ಪಷ್ಟನೆಯ ಪ್ರಮುಖ ಅಂಶಗಳು
- ಇಂಧನ ಲಭ್ಯತೆ ಮತ್ತು ಸಂಗ್ರಹಣೆ. ಭಾರತವು ಇಂಧನ ಭದ್ರತೆಯ ವಿಷಯದಲ್ಲಿ ಅತ್ಯಂತ ಸುರಕ್ಷಿತ ಮತ್ತು ಆರಾಮದಾಯಕ ಸ್ಥಿತಿಯಲ್ಲಿದೆ.
- ಪ್ರಸ್ತುತ ಇಂಧನ ದಾಸ್ತಾನು ಸಮರ್ಪಕವಾಗಿದೆ ಮತ್ತು ಇದನ್ನು ಪ್ರತಿದಿನ ಮರುಪೂರಣ ಮಾಡಲಾಗುತ್ತಿದೆ.
- ಎಲ್‌ಪಿಜಿ ಅಥವಾ ಎಲ್‌ಎನ್‌ಜಿಗೆ ಯಾವುದೇ ಕೊರತೆಯಿಲ್ಲ. ವಿಶ್ವದಲ್ಲಿ ಕಚ್ಚಾ ತೈಲಕ್ಕೆ ಯಾವುದೇ ಕೊರತೆಯಿಲ್ಲದ ಕಾರಣ ಭಾರತವು ಇತರ ಪೂರೈಕೆದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ.
- ಹೊಸ ಮಾರುಕಟ್ಟೆಗಳು ಮತ್ತು ಪೂರೈಕೆದಾರರು. ಭಾರತವು ಕತಾರ್‌ನಿಂದ ಸದ್ಯ 60 MMSCMD ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇತರೆ ಮಾರುಕಟ್ಟೆಗಳನ್ನು ಹುಡುಕುವ ಮೂಲಕ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.
- ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳು ಭಾರತಕ್ಕೆ ಅನಿಲವನ್ನು ಮಾರಾಟ ಮಾಡಲು ಮುಂದೆ ಬಂದಿವೆ.
- ಇತ್ತೀಚೆಗಷ್ಟೇ ಯುಎಇ ಮತ್ತು ಅಮೆರಿಕದೊಂದಿಗೆ ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
- ಭಾರತವು ಪ್ರಮುಖ ತೈಲ ಉತ್ಪಾದಕರು ಮತ್ತು ವ್ಯಾಪಾರಿಗಳೊಂದಿಗೆ ಕಚ್ಚಾ ತೈಲ ಹಾಗೂ ಎಲ್‌ಪಿಜಿ ಖರೀದಿಗೆ ಮಾತುಕತೆ ನಡೆಸುತ್ತಿದೆ.
- ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಮತ್ತು ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆಯ (OPEC) ಜೊತೆಗೂ ಮಾತುಕತೆ ನಡೆಯುತ್ತಿದೆ.
- ನೌಕೆಗಳಿಗೆ ವಿಮೆ ಒದಗಿಸುವ ವಿಷಯವಾಗಿ ಅಮೆರಿಕದೊಂದಿಗೆ ಭಾರತ ಚರ್ಚೆ ನಡೆಸುತ್ತಿದೆ.
- ಕೇಂದ್ರ ಸರ್ಕಾರವು ಇಂಧನ ಪರಿಸ್ಥಿತಿಯನ್ನು ಪ್ರತಿದಿನ ಎರಡು ಬಾರಿ ಪರಿಶೀಲಿಸುತ್ತಿದೆ.

