HomeLatest NewsBreaking News: ಬಳ್ಳಾರಿಗೆ ಹೊಸ ಎಸ್ಪಿ ನೇಮಕ, ಐಜಿಪಿಯೂ ವರ್ಗಾವಣೆ

Breaking News: ಬಳ್ಳಾರಿಗೆ ಹೊಸ ಎಸ್ಪಿ ನೇಮಕ, ಐಜಿಪಿಯೂ ವರ್ಗಾವಣೆ

ಬಳ್ಳಾರಿ ಗಲಭೆ, ಗುಂಡೇಟು ಪ್ರಕರಣದ ಬಳಿಕ ಜನವರಿ 1ರ ಗುರುವಾರ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಈಗ ಹೊಸ ಎಸ್‌ಪಿ ನೇಮಕ ಮಾಡಲಾಗಿದೆ.

ಕರ್ನಾಟಕ ಸರ್ಕಾರ ಬುಧವಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಡಾ.ಸುಮನ್ ಡಿ.ಪಾನ್ನೇಕರ್, ಐಪಿಎಸ್ (ಕೆಎನ್‌ 2013) ಬಳ್ಳಾರಿ ಜಿಲ್ಲೆಯ ನೂತನ ಎಸ್ಪಿಯಾಗಿ ನೇಮಕ ಮಾಡಲಾಗಿದೆ.

ರಾಜ್ಯ ಸರ್ಕಾರ ಬಳ್ಳಾರಿ ವಿಭಾಗದ ಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ವರ್ತಿಕಾ ಕಟಿಯಾರ್ (ಕೆಎನ್ 2010) ಐಜಿಪಿ ಬಳ್ಳಾರಿ ವಿಭಾಗ ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ.  ಖಾಲಿ ಇದ್ದ ಐಜಿಪಿ ಮಾನವ ಹಕ್ಕುಗಳ ಜಾರಿ ವಿಭಾಗಕ್ಕೆ ನೇಮಕ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಾ.ಸುಮನ್ ಡಿ.ಪಾನ್ನೇಕರ್ ಡಿಸಿಪಿ, ಗುಪ್ತಚರ ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಖಾಲಿ ಇದ್ದ ಬಳ್ಳಾರಿ ಎಸ್ಪಿ ಹುದ್ದೆಗೆ ನೇಮಕ ಮಾಡಲಾಗಿದೆ. ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಡಾ.ಪಿ.ಎಸ್.ಹರ್ಷ (ಕೆಎನ್ 2004) ನೇಮಕ ಮಾಡಲಾಗಿದೆ. ಅವರು ಸ್ಥಳ ನಿಯೋಜನೆ ನಿರೀಕ್ಷೆಯಲ್ಲಿದ್ದರು.

ಇಬ್ಬರು ಅಧಿಕಾರಿಗಳ ವರ್ಗಾವಣೆ: ಈ ವರ್ಗಾವಣೆಗಳ ಬಳಿಕ ಕರ್ನಾಟಕ ಸರ್ಕಾರ ಬಳ್ಳಾರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಎಸ್‌ಪಿ, ಐಜಿಪಿ ಇಬ್ಬರನ್ನು ವರ್ಗಾವಣೆ ಮಾಡಿದಂತೆ ಆಗಿದೆ. ಮಂಗಳವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳ್ಳಾರಿಗೆ ಭೇಟಿ ನೀಡಿದ್ದರು. ಬುಧವಾರ ಅಧಿಕಾರಿಗಳ ವರ್ಗಾವಣೆ ಆದೇಶ ಬಂದಿದೆ.

ಕಳೆದ ಬುಧವಾರ ಬುಧವಾರ ರಾತ್ರಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಬಂದಿತ್ತು. ಬಳ್ಳಾರಿ ಎಸ್‌ಪಿಯಾಗಿದ್ದ ಡಾ. ಶೋಭಾ ರಾಣಿ ವಿ.ಜೆ. ಅವರನ್ನು ಮಂಡ್ಯ ಜಿಲ್ಲೆಯ ನೂತನ ಎಸ್‌ಪಿ ಆಗಿ ವರ್ಗಾವಣೆ ಮಾಡಲಾಗಿತ್ತು. ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ ಅವರನ್ನು ನೇಮಕ ಮಾಡಲಾಗಿತ್ತು. ಅವರು ಗುರುವಾರ ಅಧಿಕಾರ ಸ್ವೀಕಾರ ಮಾಡಿದ್ದರು. ಗುರುವಾರ ರಾತ್ರಿ ಗಲಭೆ ಆಗಿತ್ತು. ಆದ್ದರಿಂದ ಕರ್ತವ್ಯ ಲೋಪದ ಕಾರಣ ನೀಡಿ ಪವನ್ ನೆಜ್ಜೂರ್ ಅಮಾನತುಗೊಳಿಸಲಾಗಿತ್ತು.

ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬ್ಯಾನರ್ ಅಳವಳಡಿಕೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಶಾಸಕ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಜನಾರ್ದನ ರೆಡ್ಡಿ ನಿವಾಸದ ಮುಂದೆ ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ರೆಡ್ಡಿ ಸಾವನ್ನಪ್ಪಿದ್ದರು.

ಮಂಗಳವಾರ ಬಳ್ಳಾರಿಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಬಳ್ಳಾರಿ ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ರೆಡ್ಡಿ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ಬಳ್ಳಾರಿಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿ, “ವಾಲ್ಮೀಕಿ ಅವರ ಪ್ರತಿಮೆ ನಿರ್ಮಾಣ ಹಾಗೂ ಅದಕ್ಕೆ ಜನರಿಂದ ಸಿಗುತ್ತಿರುವ ಸ್ವಾಗತ ಸಹಿಸಲಾಗದೆ ಅಸೂಯೆಯಿಂದ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದೇ ಈ ದುರ್ಘಟನೆಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ನಮಗೆ ಮಾಹಿತಿ ನೀಡಿದೆ” ಎಂದು ಹೇಳಿದ್ದರು.

“ನಾನು ಯಾರ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಲು ಇಲ್ಲಿಗೆ ಬಂದಿಲ್ಲ. ಕಾನೂನು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಬಹಳ ದಿಟ್ಟವಾಗಿ ಅಗತ್ಯ ತೀರ್ಮಾನ ತೆಗೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ನಡೆ ಸರಿ ಎಂದು ನಾನು ಹೇಳುವುದಿಲ್ಲ. ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟವರನ್ನು ಬಂಧಿಸಿದ್ದಾರೆ, ಖಾಸಗಿ ಭದ್ರತಾ ಸಿಬ್ಬಂದಿ ಹೊಂದಿರುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ” ಎಂದು ತಿಳಿಸಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular